ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ತಾಲೂಕಿನ ಬೊಮ್ಮನಕಟ್ಟೆ ಗ್ರಾಮದ ಗೋಮಾಳ ಜಾಗದಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಳಲ್ಕೆರೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಂಡೇರಿ ಕಾವಲು ಗ್ರಾಮದ ರಂಗಸ್ವಾಮಿ ಬಂಧಿತ ಆರೋಪಿಯಾಗಿದ್ದಾನೆ. ಭದ್ರಾವತಿ ತಾಲೂಕಿನ ಜಯಮ್ಮ ಕೊಲೆಯಾದ ದುರ್ದೈವಿ ಮಹಿಳೆ.
ಪ್ರಕರಣದ ಹಿನ್ನೆಲೆ: ಕಳೆದ ಸೆಪ್ಟೆಂಬರ್ 29ರಂದು ಬೊಮ್ಮನಕಟ್ಟೆ ಗ್ರಾಮದ ಗೋಮಾಳದ ಗಿಡಗಳ ಮಧ್ಯೆ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅನಾಮಧೇಯ ಮಹಿಳೆಯ ಶವ ಪತ್ತೆಯಾಗಿತ್ತು. ಯಾರೋ ದುಷ್ಕರ್ಮಿಗಳು ಆಕೆಯ ತಲೆ ಹಾಗೂ ಬಲ ಕಿವಿಗೆ ಭಾರಿ ಆಯುಧದಿಂದ ಹೊಡೆದು ಕೊಲೆ ಮಾಡಿದ್ದರು.
ಈ ಕುರಿತು ಚಿರಂಜೀವಿ ಎಲ್ ಎಂಬುವರು ನೀಡಿದ ದೂರಿನನ್ವಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ನಂ:267/2026 ಕಲಂ:103[1], 238 BNS) ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೃತಳು ಭದ್ರಾವತಿಯ ಜಯಮ್ಮ ಎಂದು ಗುರುತಿಸಿದ್ದರು.
ಅನೈತಿಕ ಸಂಬಂಧ ಹಾಗೂ ಅನುಮಾನ: ಆರೋಪಿ ರಂಗಸ್ವಾಮಿ ಹಾಗೂ ಮೃತ ಜಯಮ್ಮ ನಡುವೆ ಕಳೆದ 4-5 ತಿಂಗಳಿಂದ ಅನೈತಿಕ ಸಂಬಂಧವಿತ್ತು. ಇತ್ತೀಚೆಗೆ ಜಯಮ್ಮಳ ನಡತೆ ಬಗ್ಗೆ ರಂಗಸ್ವಾಮಿಗೆ ಅನುಮಾನ ವ್ಯಕ್ತವಾಗಿದ್ದು, ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಆಕೆ ಲೆಕ್ಕಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ಆರೋಪಿ, ಜಯಮ್ಮಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.
ಕೊಲೆ ನಡೆದದ್ದು ಹೇಗೆ?: ಸೆಪ್ಟೆಂಬರ್ 27ರಂದು ಎನ್.ಜಿ ಹಳ್ಳಿ ಗೇಟ್‌ನಿಂದ ಜಯಮ್ಮಳನ್ನು ಬಸ್ಸಿನಲ್ಲಿ ಕರೆತಂದ ರಂಗಸ್ವಾಮಿ, ಸಂಜೆ ಬೊಮ್ಮನಕಟ್ಟೆ ಗೇಟ್ ಬಳಿಯ ಗೋಮಾಳ ಜಮೀನಿಗೆ ಕರೆದೊಯ್ದಿದ್ದನು. ಅಲ್ಲಿ ಆಕೆಯ ಕುತ್ತಿಗೆಗೆ ಕೈಯಿಂದ ಹೊಡೆದು, ನಂತರ ಅಲ್ಲೇ ಬಿದ್ದಿದ್ದ ಕಲ್ಲಿನಿಂದ ತಲೆ ಹಾಗೂ ಕಿವಿಯ ಭಾಗಕ್ಕೆ ಬಲವಾಗಿ ಜಜ್ಜಿಕೊಲೆ ಮಾಡಿದ್ದನು. ಬಳಿಕ ಕೃತ್ಯಕ್ಕೆ ಬಳಸಿದ ಕಲ್ಲನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದನು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಸೆ, ಹೆಚ್ಚುವರಿ ಎಸ್‌ಪಿ ಡಾ. ಶಿವಕುಮಾರ್ ಆರ್. ಮತ್ತು ಡಿವೈಎಸ್‌ಪಿ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ವೃತ್ತ ನಿರೀಕ್ಷಕ ಶ್ರೀಶೈಲ ಜಿ ಚೌಗುಲಾ, ಪಿಎಸ್‌ಐ ವಿಶ್ವನಾಥ ಜಿ.ಎನ್ ಹಾಗೂ ಸಿಬ್ಬಂದಿಗಳ ತಂಡವು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಪತ್ತೆ ಕಾರ್ಯದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದಾರೆ.




