ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಂಗೀತ ಮತ್ತು ಕಲೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದಲ್ಲೂ ಸಂಗೀತ ಕ್ಷೇತ್ರಕ್ಕೆ ವಿಶೇಷ ಸ್ಥಾನವಿತ್ತು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ನಗರಸಭೆ ಕಲ್ಯಾಣ ಮಂಟಪದಲ್ಲಿ ರೈನ್ ಟ್ರಸ್ಟ್, ಅವುಕಲಾ, ಮೌಲ್ಯಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಂಘ ಹಾಗೂ ಮುಂಗಾರು ಮೇಲೋಡಿಯಸ್ ಮ್ಯೂಸಿಕ್ & ಇವೆಂಟ್ಸ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ 'ಸಾಂಸ್ಕೃತಿಕ ಗಾನ ಸಂಗಮ-2026 ಸೀಸನ್-3' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತದ ಶಕ್ತಿ: ಸಂಗೀತಕ್ಕೆ ಖುಷಿ ಮತ್ತು ದುಃಖವನ್ನು ನಿವಾರಿಸುವ ಅಪಾರ ಶಕ್ತಿಯಿದೆ. ರಾಜ-ಮಹರಾಜರ ಕಾಲದಿಂದಲೂ ಮನೋಲ್ಲಾಸಕ್ಕಾಗಿ ಅರಮನೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಪರಂಪರೆ ಮುಂದುವರೆದುಕೊಂಡು ಬಂದಿದೆ ಎಂದು ಸಚಿವರು ಸ್ಮರಿಸಿದರು.
ಕಲಾವಿದರ ಬದುಕು ಅತಂತ್ರ: ಆಧುನಿಕ ಸ್ಮಾರ್ಟ್ ಯುಗದಲ್ಲಿ ಮೊಬೈಲ್ ಕೈಯಲ್ಲಿದ್ದರೂ ಸಂಗೀತಾಸಕ್ತರ ಸಂಖ್ಯೆ ಹಾಗೂ ಕಲಾವಿದರ ಪ್ರೋತ್ಸಾಹ ಕಡಿಮೆಯಾಗುತ್ತಿದ್ದು, ಕಲಾವಿದರ ಬದುಕು ಅತಂತ್ರವಾಗಿದೆ. ಸರ್ಕಾರಗಳು ಅವರನ್ನು ಉತ್ತೇಜಿಸುವ ಕೆಲಸ ಮಾಡಬೇಕೆಂದು ಹಿರಿಯ ಮುಖಂಡ ಕಸವನಹಳ್ಳಿ ರಮೇಶ್ ಆಗ್ರಹಿಸಿದರು.
ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ: ಚಳ್ಳಕೆರೆ ಸೇರಿದಂತೆ ಈ ಭಾಗದಲ್ಲಿ ಬರದಛಾಯೆ ಜನರ ಬದುಕನ್ನು ಹೈರಾಣಾಗಿಸಿದರೂ, ಗ್ರಾಮೀಣ ಭಾಗದ ಯುವಕರು ಸಂಗೀತವನ್ನೇ ಬದುಕಾಗಿಸಿಕೊಂಡಿದ್ದಾರೆ. ಅವರ ಕಲೆಗೆ ಸಾರ್ವಜನಿಕರ ಪ್ರೋತ್ಸಾಹ ಅಗತ್ಯವಿದೆ ಎಂದು ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಪಂ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ, ಮಾಜಿ ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ ಸೇರಿದಂತೆ ಹಲವು ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.



