ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣದ ಅಕ್ರಮ ತನಿಖೆಯಲ್ಲಿ ಸಿಬಿಐ ಹಾಗೂ ಲೋಕಾಯುಕ್ತ ಸಂಸ್ಥೆಗಳು ಚಾರ್ಜ್‌ಶೀಟ್‌ಸಲ್ಲಿಸಿದ್ದು, ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಲಾಗಿದೆ.
ತನಿಖೆ ಮುಂದುವರಿದಿರುವ ಬೆನ್ನಲ್ಲೇ ಹಾಗೂ ಯಾವುದೇ ಖುಲಾಸೆ ದೊರೆಯದಿರುವಾಗ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ಅಶೋಕ್ ಅವರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ಆರೋಪಗಳ ಹಿನ್ನೆಲೆಯಲ್ಲಿ ಆರಂಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ತಂದಿರುವುದು ಸಂವಿಧಾನಾತ್ಮಕ ನೈತಿಕತೆ ಮತ್ತು ಸಾರ್ವಜನಿಕ ವಿಶ್ವಾಸಾರ್ಹತೆಗೆ ಎಸೆದಿರುವ ಗಂಭೀರ ಸವಾಲು ಎಂದು ಆರ್‌ಆಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ.
‘ಮನೋಜ್ ನರುಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ಪ್ರಕರಣವನ್ನು ಉಲ್ಲೇಖಿಸಿರುವ ಅವರು, ಉನ್ನತ ಸಂವಿಧಾನಿಕ ಹುದ್ದೆಗಳಲ್ಲಿ ಸಾರ್ವಜನಿಕ ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಮತ್ತು ನೈತಿಕತೆ ಅತ್ಯಂತ ಮಹತ್ವದ್ದು ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ನೆನಪಿಸಿದ್ದಾರೆ.
ರಾಜಕೀಯ ಅನುಕೂಲಕ್ಕಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನು ಬಲಿಕೊಡಬಾರದು ಹಾಗೂ ಕರ್ನಾಟಕದ ಜನತೆಗೆ ಪಾರದರ್ಶಕ, ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಆಡಳಿತ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ಪ್ರತಿಪಾದಿಸಿರುವ ಅಶೋಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿ. ನಾಗೇಂದ್ರ ಅವರ ಸಂಪುಟ ಸೇರ್ಪಡೆಯನ್ನು ತಕ್ಷಣವೇ ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



