ನಗರಸಭೆಯ ಪೌರಾಯುಕ್ತರ ನಿಷ್ಕ್ರಿಯತೆಗೆ ಬೇಸತ್ತ ಜನತೆ!
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಐತಿಹಾಸಿಕ ಕೋಟೆ ನಗರಿ ಚಿತ್ರದುರ್ಗ ಇಂದು ಸೌಂದರ್ಯೀಕರಣದ ಮಾತುಗಳ ನಡುವೆಯೂ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನೈರ್ಮಲ್ಯದ ಹದಗೆಟ್ಟ ಸ್ಥಿತಿ ಹಾಗೂ ಹಂದಿಗಳ ಹಾವಳಿಯಿಂದಾಗಿ ಹೈರಾಣಾಗಿದ್ದಾರೆ. ನಗರಸಭೆ ಪೌರಾಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಒಳಗಣ್ಣಿನಿಂದ ನೋಡಬೇಕಾಗಿದೆ.
ಹಂದಿಗಳ ವಿಪರೀತ ಹಾವಳಿಯಿಂದಾಗಿ ನಾಗರಿಕರ ನರಕಯಾತನೆ ಮಾತ್ರ ಕಣ್ಣಿಗೆ ಕಾಣದಂತಾಗಿದೆ. ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಬಡಾವಣೆಗಳು ಸ್ಟೇಡಿಯಂ ರಸ್ತೆಯ ಬುದ್ಧ ಸರ್ಕಲ್‌ನಿಂದ ಮೇಲ್ಭಾಗದಲ್ಲಿರುವ ಟೀಚರ್ಸ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಹಲವು ಬಡಾವಣೆಗಳು ನಗರಸಭೆಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿವೆ.
ಈ ಭಾಗದಲ್ಲಿ: ಸಮರ್ಪಕವಾದ ರಸ್ತೆಗಳಿಲ್ಲದೆ ಸಾರ್ವಜನಿಕರು ಮತ್ತು ವಾಹನ ಸವಾರರು ನಿತ್ಯವೂ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಸರಿಯಾದ ಒಳಚರಂಡಿ (ಡ್ರೈನೇಜ್) ವ್ಯವಸ್ಥೆ ಇಲ್ಲದೆ, ಇಡೀ ಪ್ರದೇಶ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಡುತ್ತಿದೆ.
ನಗರದಾದ್ಯಂತ ಹಂದಿಗಳ ಸಾಮ್ರಾಜ್ಯ: ಪೌರಾಯುಕ್ತರ ವಿಫಲತೆ!
ನಗರದಾದ್ಯಂತ ಪ್ರಸ್ತುತ ಹಂದಿಗಳ ಹಾವಳಿ ಮಿತಿಮೀರಿದೆ. ವಸತಿ ಪ್ರದೇಶಗಳು ಹಾಗೂ ಸಾರ್ವಜನಿಕ ರಸ್ತೆಗಳಲ್ಲೇ ಹಂದಿಗಳು ಹಿಂಡುಹಿಂಡಾಗಿ ಸಂಚರಿಸುತ್ತಿವೆ. ಇದರಿಂದಾಗಿ ಇಡೀ ನಗರದಲ್ಲಿ ದುರ್ನಾತ ಬೀರುತ್ತಿದ್ದು, ಸಣ್ಣ ಮಕ್ಕಳು ವಯೋವೃದ್ಧರು ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ನರಳುತ್ತಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಬೀದಿಗಳಲ್ಲಿ ಹಂದಿಗಳ ಕಾಟ: ನಿವಾಸಿಗಳ ಆರೋಗ್ಯಕ್ಕೆ ಕಂಟಕ...
ಆರೋಗ್ಯಕರ ಪರಿಸರವೇ ನೆಮ್ಮದಿಯ ಜೀವನಕ್ಕೆ ನಾಂದಿ. ಆದರೆ ನಗರ ಪ್ರದೇಶಗಳ ಬಹುತೇಕ ವಸತಿ ಪ್ರದೇಶಗಳಲ್ಲಿ "ಹಂದಿಗಳ ಕಾಟ" ನಾಗರಿಕರ ನೆಮ್ಮದಿಗೆ ಭಂಗ ತರುತ್ತಿದೆ. ಹಿಂಡು ಹಿಂಡಾಗಿ ಮೇಯುತ್ತಿರುವ ಹಂದಿಗಳನ್ನು ನೋಡಬಹುದಾಗಿದೆ. ಇದು ಕೇವಲ ಒಂದು ಪ್ರದೇಶದ ಚಿತ್ರಣವಲ್ಲ, ಹತ್ತಾರು ಬಡಾವಣೆಗಳ ಕಹಿ ವಾಸ್ತವ.
ಅನಾರೋಗ್ಯದ ಆಪತ್ತು: ರೋಗರುಜಿನಗಳ ಹೆಬ್ಬಾಗಿಲು...
ಹಂದಿಗಳು ಹೆಚ್ಚಾಗಿ ಕೊಳಚೆ ಪ್ರದೇಶ, ಚರಂಡಿ ಹಾಗೂ ಕಸದ ರಾಶಿಗಳಲ್ಲೇ ಕಾಲ ಕಳೆಯುವುದರಿಂದ, ಅವು ರೋಗಕಾರಕ ಕ್ರಿಮಿಗಳ ಪ್ರಮುಖ ವಾಹಕಗಳಾಗಿವೆ.
ಭಯಾನಕ ರೋಗಗಳ ಭೀತಿ: ಹಂದಿಗಳಿಂದಾಗಿ ಮಲೇರಿಯಾ, ಡೆಂಗ್ಯೂ ಮತ್ತು ಮೆದುಳು ಜ್ವರ ಹರಡುವ ಸೊಳ್ಳೆಗಳು ತೀವ್ರವಾಗಿ ಹೆಚ್ಚಾಗುತ್ತವೆ.
ಕೊಳಕು ಪರಿಸರ: ಹಂದಿಗಳು ಸಾರ್ವಜನಿಕ ರಸ್ತೆಗಳಲ್ಲೇ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಇಡೀ ವಾತಾವರಣ ದುರ್ವಾಸನೆಯಿಂದ ತುಂಬಿಹೋಗುತ್ತದೆ. ಇದು ಉಸಿರಾಟದ ತೊಂದರೆ ಹಾಗೂ ವಾಂತಿ-ಭೇದಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ.
ಮಕ್ಕಳ ಮತ್ತು ವೃದ್ಧರ ಸುರಕ್ಷತೆಗೆ ಧಕ್ಕೆ:
ಮನೆಯಿಂದ ಹೊರಗೆ ಕಾಲಿಡಬೇಕೆಂದರೆ ನಿವಾಸಿಗಳು ಇಂದು ನಡುಗುವಂತಾಗಿದೆ. ರಸ್ತೆಗಳಲ್ಲಿ ಹಂದಿಗಳು ರಾಜಾರೋಷವಾಗಿ ತಿರುಗಾಡುವುದರಿಂದ ಸಣ್ಣ ಮಕ್ಕಳನ್ನು ಆಟವಾಡಲು ಹೊರಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ.
ಹಂದಿಗಳ ಆಕ್ರಮಣಕಾರಿ ಪ್ರವೃತ್ತಿಯಿಂದಾಗಿ ವೃದ್ಧರ ಹಾಗೂ ಮಕ್ಕಳ ಮೇಲೆ ದಿಢೀರ್ ದಾಳಿ ಮಾಡಿ ಗಾಯಗೊಳಿಸಿದ ಉದಾಹರಣೆಗಳೂ ಇವೆ.
ಸಂಚಾರಕ್ಕೆ ಅಡ್ಡಿ – ಅಪಘಾತಗಳ ಆತಂಕ:
ನಗದ ರಸ್ತೆಗಳ ಮಧ್ಯದಲ್ಲೇ ಹಂದಿಗಳ ಹಿಂಡು ಬೀಡು ಬಿಟ್ಟಿರುತ್ತದೆ. ದ್ವಿಚಕ್ರ ವಾಹನ ಸವಾರರು ಇವುಗಳಿಗೆ ಹೆದರಿ ಗಾಡಿ ನಿಯಂತ್ರಣ ತಪ್ಪಿ ಬಿದ್ದ ಘಟನೆಗಳು ಸಾಕಷ್ಟಿವೆ. ಹಂದಿಗಳು ರಸ್ತೆ ದಾಟುವಾಗ ದಿಢೀರ್ ನುಗ್ಗುವುದರಿಂದ ಸವಾರರಿಗೆ ಕಾಣಿಸದೆ ಪ್ರಾಣಾಪಾಯದಂತಹ ಅಪಘಾತಗಳು ಸಂಭವಿಸುತ್ತಿವೆ. ಹಂದಿ ಸಾಕಾಣಿಕೆದಾರರು ಇವುಗಳನ್ನು ಜನವಸತಿ ಪ್ರದೇಶಗಳಿಂದ ದೂರವಿಡದೆ ಮುಕ್ತವಾಗಿ ಬಿಡುತ್ತಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಾಗರಿಕರ ಆಕ್ರೋಶ:
ನಗರಸಭೆ ಪೌರಾಯುಕ್ತೆ ಅವರು ನಗರದಲ್ಲಿನ ಹಂದಿಗಳ ಹಾವಳಿ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಾರ್ವಜನಿಕರು ಪೌರಾಯುಕ್ತೆಯ ಕಚೇರಿಗೆ ತೆರಳಿ ಸಮಸ್ಯೆ ಹೇಳಿದರೆ ಅರ್ಜಿ ಕೊಟ್ಟಿದ್ರಾ, ದೂರು ನೀಡಿದ್ದರೆ ದಾಖಲೆ ಕೊಡಿ, ಬೇರೆ ಬೀದಿ, ವಾರ್ಡ್ ಗಳ ಸಮಸ್ಯೆ ನಿಮಗೇಕೆ ಎಂದು ಉಡಾಫೆ ಮಾತನಾಡುವ ಪೌರಾಯುಕ್ತರಿಗೆ ಬಾಯಿ ಮಾತಿನಲ್ಲಿ ಸಮಸ್ಯೆ ಹೇಳಿದರೆ ಆಗುವುದಿಲ್ಲವಂತೆ. ಹಂದಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳನ್ನು ಮೌಖಿಕವಾಗಿ ಪೌರಾಯುಕ್ತರ ಗಮನಕ್ಕೆ ತಂದರೂ ಅವರು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ಕೇವಲ ದೂರು, ಅರ್ಜಿಗಷ್ಟೇ ಇವರ ಆಡಳಿತ ಸೀಮಿತವಾಗಿದೆಯೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳೇ ಸೂಕ್ತ ಕ್ರಮ ವಹಿಸಿ: ನಾಗರಿಕರ ಆಗ್ರಹ
ನಗರಸಭೆಯ ಪೌರಾಯುಕ್ತರ ನಿಷ್ಕ್ರಿಯತೆಯಿಂದ ಬೇಸತ್ತಿರುವ ಚಿತ್ರದುರ್ಗದ ಜನತೆ ಈಗ ಜಿಲ್ಲಾಧಿಕಾರಿಗಳ ಕಡೆಗೆ ಮುಖ ಮಾಡಿದ್ದಾರೆ.
ಟೀಚರ್ಸ್ ಕಾಲೋನಿ ಸೇರಿದಂತೆ ವಂಚಿತ ಬಡಾವಣೆಗಳಿಗೆ ಕೂಡಲೇ ಭೇಟಿ ನೀಡಿ ಪರಿಶೀಲಿಸಬೇಕು. ನಗರಸಭೆ ಪೌರಾಯುಕ್ತರು, ಇತರೆ ಸಂಬಂಧಿತ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ, ಹಂದಿಗಳ ಹಾವಳಿಯಿಂದ ಮುಕ್ತಿ ನೀಡಲು ಕಟ್ಟುನಿಟ್ಟಿನ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು.
ಕೋಟೆ ನಾಡಿನ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತವು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳವುದು ಅನಿವಾರ್ಯ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಪರಿಹಾರವೇನು? ನಾಗರಿಕರ ಆಗ್ರಹ
"ನಮಗೆ ಸ್ವಚ್ಛ ಗಾಳಿ ಮತ್ತು ರೋಗಮುಕ್ತ ಪರಿಸರ ಬೇಕು" ಎನ್ನುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಈ ಸಮಸ್ಯೆಗೆ ಮುಕ್ತಿ ಸಿಗಬೇಕಾದರೆ ನಗರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು, ವಸತಿ ಪ್ರದೇಶಗಳಲ್ಲಿ ಮುಕ್ತವಾಗಿ ತಿರುಗುವ ಹಂದಿಗಳನ್ನು ಹಿಡಿದು ನಗರದಿಂದ ದೂರವಿಡಬೇಕು.
ಮಾಲೀಕರಿಗೆ ದಂಡ: ಜನವಸತಿ ಪ್ರದೇಶಗಳಲ್ಲಿ ಹಂದಿಗಳನ್ನು ಬಿಡುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ದಂಡ ವಿಧಿಸಬೇಕು.
ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳಲ್ಲ; ಅಲ್ಲಿ ವಾಸಿಸುವ ಜನರ ಆರೋಗ್ಯವೂ ಮುಖ್ಯ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಕಣ್ಣು ತೆರೆದು ಈ 'ಹಂದಿಗಳ ಕಾಟ'ಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಇಲ್ಲದಿದ್ದರೆ ಬಡಾವಣೆಗಳು ರೋಗಗಳ ತವರೂರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.



