ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಅಕ್ರಮದ ಆರೋಪ ಸಂಬಂಧ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ನೈಸ್ ರಸ್ತೆಯ ಮಾದವಾರ ಟೋಲ್ ಬಳಿ ಭೂಮಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ರೈತರೊಂದಿಗೆ ಅವರು ಶುಕ್ರವಾರ ಮಹತ್ವದ ಸಂವಾದ ನಡೆಸಿದರು.
ಇಡೀ ದಿನ ರೈತರ ಜೊತೆಯೇ ಕಾಲ ಕಳೆದ ಕುಮಾರಸ್ವಾಮಿಯವರು, ನೈಸ್ ಯೋಜನೆಗಾಗಿ ಜಮೀನು ಬಿಟ್ಟುಕೊಟ್ಟು ಅತಂತ್ರರಾಗಿರುವ ರೈತರ ಅಹವಾಲುಗಳನ್ನು ನೇರವಾಗಿ ಆಲಿಸಿದರು. ಇದೇ ವೇಳೆ ನೈಸ್ ರಸ್ತೆಗೆ ಹೊಂದಿಕೊಂಡಿರುವ ವಿವಿಧ ಹಳ್ಳಿಗಳಿಗೂ ಭೇಟಿ ನೀಡಿ, ಸ್ಥಳದಲ್ಲೇ ರೈತರ ಸಮಸ್ಯೆಗಳು ಹಾಗೂ ಅವರ ಸಂಕಷ್ಟಗಳನ್ನು ಕಣ್ಣಾರೆ ಕಂಡು ತಿಳಿದುಕೊಂಡರು.
"ನಥಿಂಗ್ ನೈಸ್" ಹೋರಾಟದ ಮುಂದುವರಿದ ಭಾಗ: ಕೆಲ ದಿನಗಳ ಹಿಂದಷ್ಟೇ “ನಥಿಂಗ್ ನೈಸ್” ಹೆಸರಿನಲ್ಲಿ ವಿಡಿಯೋ ಪ್ರೆಸೆಂಟೇಷನ್ ಬಿಡುಗಡೆ ಮಾಡಿದ್ದ ಹೆಚ್.ಡಿ. ಕುಮಾರಸ್ವಾಮಿ, ನೈಸ್ ಸಂಸ್ಥೆಯ ಅಕ್ರಮಗಳು ಹಾಗೂ ಒಪ್ಪಂದದ ಉಲ್ಲಂಘನೆ ಕುರಿತು ಹಲವು ಸ್ಫೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ನೇರವಾಗಿ ರೈತರ ಅಂಗಳಕ್ಕಿಳಿದು ಹೋರಾಟವನ್ನು ರೂಪಿಸುತ್ತಿದ್ದಾರೆ.
ಸುದ್ದಿಗೋಷ್ಠಿ: ರೈತರೊಂದಿಗೆ ಸುದೀರ್ಘ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಪಡೆದು ರೈತರು ಹಂಚಿಕೊಂಡಿರುವ ನೋವುಗಳು, ಭೂಸ್ವಾಧೀನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳು ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಅವರು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಲಿದ್ದಾರೆ ಎನ್ನಲಾಗಿದೆ.




