ಚಂದ್ರವಳ್ಳಿ ನ್ಯೂಸ್, ಕನಕಪುರ:
ಅನ್ನದಾತರ ಏಳಿಗೆ ಹಾಗೂ ರೈತರ ಸ್ವಾಭಿಮಾನದ ಬದುಕಿಗಾಗಿ ಒತ್ತಾಯಿಸಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಕನಕಪುರದಲ್ಲಿ 'ರೈತ ಸ್ವಾಭಿಮಾನ ಯಾತ್ರೆ' ಯಶಸ್ವಿಯಾಗಿ ನಡೆಯಿತು.
ಯಾತ್ರೆಯ ಆರಂಭಕ್ಕೂ ಮುನ್ನ ಕನಕಪುರದ ಶ್ರೀ ಶಿವ-ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ, ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಕನಕಪುರ ಶಿವನಂದ ನಗರದ ರೈಸ್ ಮಿಲ್ ಸರ್ಕಲ್‌ನಿಂದ ಚೆನ್ನಬಸಪ್ಪ ಸರ್ಕಲ್‌ವರೆಗೆ ಸಹಸ್ರಾರು ರೈತರೊಂದಿಗೆ ಬೃಹತ್ ಪಾದಯಾತ್ರೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅವರು, ರೈತರ ಹಿತರಕ್ಷಣೆ ಮತ್ತು ಅವರ ಏಳಿಗೆಯೇ ನಮ್ಮ ಮುಖ್ಯ ಆದ್ಯತೆಯಾಗಿದ್ದು, ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅನ್ನದಾತರ ಬೆಂಬಲ ನೆಮ್ಮದಿ ತಂದಿದೆ ಎಂದರು.

ಈ ಬೃಹತ್ ಪಾದಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಮಾಜಿ ಶಾಸಕರು, ವಿವಿಧ ಹಂತದ ಪದಾಧಿಕಾರಿಗಳು, ಪ್ರಮುಖ ನಾಯಕರು, ಸಾವಿರಾರು ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ರೈತರು ಭಾಗವಹಿಸಿ ಸಾಥ್ ನೀಡಿದರು.
ಯಾತ್ರೆಯ ಉದ್ದಕ್ಕೂ ಸಾಥ್ ನೀಡಿದ ಸಾವಿರಾರು ರೈತರು ಹಾಗೂ ಪಕ್ಷದ ಕಾರ್ಯಕರ್ತರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ರಾಜ್ಯದ ಅನ್ನದಾತರ ಹಿತರಕ್ಷಣೆಗಾಗಿ ತಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಮಾಜಿ ಶಾಸಕರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




