ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ರೋಜಿಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ ಮಾತನಾಡಿ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯ ಕಾಳಜಿ ವಹಿಸುವುದು ಪೋಷಣ್ ಮಾಸಾಚರಣೆಯ ಪ್ರಮುಖ ಉದ್ದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದೇಶಿ ಆಹಾರ ಪದ್ಧತಿಯತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಪುನಃ ಅಳವಡಿಸಿಕೊಳ್ಳುವ ಅಗತ್ಯವಿದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ತಮ್ಮ ನಿತ್ಯದ ಆಹಾರದಲ್ಲಿ ಸಿರಿಧಾನ್ಯ, ಸೊಪ್ಪು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾರೂ ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರದ ಕುರಿತು ಅರಿವು ಮೂಡಿಸುವ ಜವಾಬ್ದಾರಿ ವಹಿಸಲಾಗಿದೆ ಎಂದರು.
ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್ ಮಾತನಾಡಿ, ಸರ್ಕಾರ ಮಾತೃ ವಂದನಾ ಯೋಜನೆ, ಮಾತೃಪೂರ್ಣ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಂದು ಮಗುವೂ ಅಪೌಷ್ಟಿಕತೆಯಿಂದ ಮುಕ್ತವಾಗಿರಬೇಕು ಎಂಬುದು ಈ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ವಿವಿದ ಬಗೆಯ ಹಣ್ಣು ತರಕಾರಿ ಸೊಪ್ಪು ಸಿರಿಧಾನ್ಯಗಳಲ್ಲಿ ಅಲಂಕಾರ ಮಾಡಲಾಗಿದ್ದು ಐಸಿಡಿಎಸ್ ಕಾರ್ಯಕ್ರಮಗಳ ಜಾಗೃತಿ ಫಲಕಗಳನ್ನು ಅಳವಡಿಸಲಾಗಿತ್ತು.
ಎಸಿಡಿಪಿಒ ಅರುಣ್ ಕುಮಾರ್, ರೂಪ, ಮೇಲ್ವಿಚಾರಕರಾದ ನಿರ್ಮಲಾ, ಚೇತನಾ,ಲಕ್ಷ್ಮೀ, ಜಯಲಕ್ಷ್ಮಿ, ಮಾಲಾ, ಕಸಬಾ-1ನೇ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ರೋಜಿಪುರ ಅಂಗನವಾಡಿ ಶಿಕ್ಷಕಿ ಶೈಲಾಜಾ ಗೌಡ ಹಾಗೂ ಸ್ತ್ರೀಶಕ್ತಿ ಸಂಘದ ಮಹಿಳೆಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.




