ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಸಾರಿಗೆ ಇಲಾಖೆಯು ಒಂದರ ಮೇಲೊಂದು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದು, ತೈಲ ಬಿಲ್ ಬಾಕಿ ಸಮಸ್ಯೆಯ ಬೆನ್ನಲ್ಲೇ ಇದೀಗ ಬಸ್ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ಮುದ್ರಿಸಲು ಬಳಸುವ ಪೇಪರ್ ರೋಲ್ಗಳ ತೀವ್ರ ಕೊರತೆ ಎದುರಾಗಿದೆ. ಪರಿಣಾಮವಾಗಿ, ಕಾಗದ ಉಳಿತಾಯದ ಅನಿವಾರ್ಯತೆಯಿಂದಾಗಿ ನಿರ್ವಾಹಕರು 3 ರಿಂದ 4 ಪ್ರಯಾಣಿಕರಿಗೆ ಸೇರಿಸಿ ಒಂದೇ ಟಿಕೆಟ್ ವಿತರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಏನಿದು ಸಮಸ್ಯೆ?: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ ಯೋಜನೆ' ಜಾರಿಯಾದ ನಂತರ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ಸಬ್ಸಿಡಿ ಮತ್ತು ಆರ್ಥಿಕ ಮರುಪಾವತಿಯಲ್ಲಿ ವಿಳಂಬವಾಗುತ್ತಿರುವುದು ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ದುರ್ಬಲಗೊಳಿಸಿದೆ.
ಕೆಲ ದಿನಗಳ ಹಿಂದೆ ತೈಲ ಕಂಪನಿಗಳಿಗೆ ಪಾವತಿಸಬೇಕಿದ್ದ ಅಂದಾಜು 170 ಕೋಟಿ ರೂಪಾಯಿಗೂ ಅಧಿಕ ಬಾಕಿ ಹಣ ಪಾವತಿಯಾಗದ ಕಾರಣ, ಬಸ್ಗಳಿಗೆ ಡೀಸೆಲ್ ಕೊರತೆ ಎದುರಾಗಿ ಹಲವು ಟ್ರಿಪ್ಗಳು ರದ್ದಾಗಿದ್ದವು. ಈ ಸಂಕಷ್ಟದಿಂದ ಹೊರಬರುವಷ್ಟರಲ್ಲೇ, ಇಟಿಎಂ ಯಂತ್ರಗಳಿಗೆ ಬೇಕಾದ ಮುದ್ರಣ ಕಾಗದ ಪೂರೈಕೆದಾರರಿಗೂ ಬಾಕಿ ಹಣ ಪಾವತಿಯಾಗದ ಕಾರಣ ರೋಲ್ಗಳ ಸರಬರಾಜು ಸಂಪೂರ್ಣ ಕುಸಿದಿದೆ.
ಮೂರು-ನಾಲ್ಕು ಪ್ರಯಾಣಿಕರಿಗೆ ಒಂದೇ ಟಿಕೆಟ್: ಲಭ್ಯವಿರುವ ಸೀಮಿತ ಕಾಗದದ ರೋಲ್ಗಳನ್ನು ಮಿತವಾಗಿ ಬಳಸುವ ಅನಿವಾರ್ಯತೆಯಲ್ಲಿರುವ ನಿರ್ವಾಹಕರು, ಒಂದೇ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಒಂದೇ ಕುಟುಂಬದ 3 ರಿಂದ 4 ಪ್ರಯಾಣಿಕರನ್ನು ಒಟ್ಟಿಗೆ ಸೇರಿಸಿ ಒಂದೇ ಟಿಕೆಟ್ ಪ್ರಿಂಟ್ ಮಾಡಿ ನೀಡುತ್ತಿದ್ದಾರೆ.
ವಿಶೇಷವಾಗಿ ಬೀದರ್ನಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಬಸ್ಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಕೆಲವೆಡೆ ಕಂಡಕ್ಟರ್ಗಳು ಅಕ್ಕಪಾಸಿನ ಬಸ್ಗಳ ಸಹೋದ್ಯೋಗಿಗಳಿಂದ ರೋಲ್ಗಳನ್ನು ಎರವಲು ಪಡೆದು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಅಸ್ಥಿರತೆಯು ಸಾರಿಗೆ ನಿಗಮಗಳ ದೈನಂದಿನ ಕಾರ್ಯನಿರ್ವಹಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಈ ಘಟನೆ ಕನ್ನಡಿಯಾಗಿದೆ.



