ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಮಾಜಿ ಸಂಸದ ಪ್ರತಾಪ್‌ಸಿಂಹ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ಗೆ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ ವಿಚಾರಣೆಗೆ ಸುದೀರ್ಘ ಸಮಯದಿಂದ ನ್ಯಾಯಾಲಯಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬಂಧನಕ್ಕೆ 'ಜಾಮೀನು ರಹಿತ ವಾರೆಂಟ್' ಜಾರಿಗೊಳಿಸಿದೆ.
ಕಳೆದ ವರ್ಷ ಪ್ರತಾಪ್‌ಸಿಂಹ ಮತ್ತು ಪ್ರದೀಪ್ ಈಶ್ವರ್ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಈ ವೇಳೆ ಉಂಟಾದ ಪರಸ್ಪರ ನಿಂದನೆಗೆ ಸಂಬಂಧಿಸಿದಂತೆ ಇಬ್ಬರೂ ನ್ಯಾಯಾಲಯದ ಮೊರೆ ಹೋಗಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರತಾಪ್ ಸಿಂಹ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರ ಪೀಠವು ಕಠಿಣ ಕ್ರಮ ಕೈಗೊಂಡಿದ್ದು, ವಾರೆಂಟ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7 ಕ್ಕೆ ಮುಂದೂಡಿದೆ.
ಏನಿದು ವಾಕ್ಸಮರದ ಹಿನ್ನೆಲೆ?, ಪರಸ್ಪರ ವಾಗ್ದಾಳಿ:
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮನ್ನು 'ಮುಳ್ಳುಹಂದಿ' ಮತ್ತು 'ಕಾಮಿಡಿ ಪೀಸ್' ಎಂದು ಕರೆದಿದ್ದಕ್ಕೆ ತೀವ್ರವಾಗಿ ತಿರುಗೇಟು ನೀಡಿದ್ದ ಪ್ರದೀಪ್ ಈಶ್ವರ್, ವೈಯಕ್ತಿಕ ವಿಚಾರಗಳನ್ನು ಎಳೆತಂದು ವ್ಯಂಗ್ಯವಾಡಿದ್ದರು.
ವೈಯಕ್ತಿಕ ನಿಂದನೆ: "ನಮ್ಮ ತಂದೆ ನಿಮ್ಮ ಊರಿಗೆ ಬರಲಿಲ್ಲ ಅಂತಾ ಬೇಜಾರಾ? ನಾನ್ ಕಳುಹಿಸೋಕೆ ರೆಡಿ ಇಲ್ಲ ಗುರು. ನಮ್ಮದು ಸಂಪ್ರದಾಯಸ್ಥ ಕುಟುಂಬ. ಪ್ರತಾಪ್ ಸಿಂಹ ಅವರ ತಂದೆ-ತಾಯಿ ದೈವ ಭಕ್ತರಿರಬೇಕು, ಅದಕ್ಕೆ 'ಪ್ರತಾಪ' ಅಂತ ಹೆಸರಿಟ್ಟಿದ್ದಾರೆ. ಇಲ್ಲದಿದ್ದರೆ 'ಕೋತಿ' ಅಂತ ಇಡುತ್ತಿದ್ದರು," ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದರು.
ಮಾನನಷ್ಟ ಕೇಸ್: ಈ ಹೇಳಿಕೆಯಿಂದ ತಮ್ಮ ತಂದೆ-ತಾಯಿ ಹಾಗೂ ಕುಟುಂಬಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿ ಪ್ರತಾಪ್ ಸಿಂಹ ಅವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ನ್ಯಾಯಾಲಯವೇ ಈಗ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿರುವುದರಿಂದ ಶಾಸಕ ಪ್ರದೀಪ್ ಈಶ್ವರ್ ಅವರು ಸೆಪ್ಟೆಂಬರ್ 7ರ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯುವುದು ಅನಿವಾರ್ಯವಾಗಿದೆ.



