ಚಂದ್ರವಳ್ಳಿ ನ್ಯೂಸ್, ಮೈಸೂರು:
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನೀಡಿದ ತೀವ್ರ ಸ್ವರೂಪದ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅಷ್ಟೇ ತೀವ್ರವಾಗಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರದೀಪ್ ಈಶ್ವರ್ ಪದ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದರ ಜೊತೆಗೆ, ಮಾಧ್ಯಮಗಳ ನಡೆಗೂ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಾಪ್ ಸಿಂಹ ಆಕ್ರೋಶದ ಮುಖ್ಯಾಂಶಗಳು:
ಮಾಧ್ಯಮಗಳ ವಿರುದ್ಧ ಕಿಡಿ: "ದಿನಾ ಅವನ (ಪ್ರದೀಪ್ ಈಶ್ವರ್) ಹತ್ತಿರ ಯಾಕೆ ಮೈಕ್ ಹಿಡಿದುಕೊಂಡು ಹೋಗ್ತೀರಾ? ನನ್ನ ವಿರುದ್ಧ ಈ ರೀತಿಯ ಕೀಳು ಪದಗಳನ್ನು ಬಳಸಬಾರದು ಎಂದು ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದರೂ ಪದೇ ಪದೇ ಅವನ ಬಳಿ ಹೋಗುತ್ತೀರಿ" ಎಂದು ಮಾಧ್ಯಮಗಳ ವಿರುದ್ಧ ಪ್ರತಾಪ್ ಸಿಂಹ ಗರಂ ಆದರು.
ವಿಚಾರವಂತರ ಬಗ್ಗೆ ಮಾತನಾಡಿ: "ಸಮಾಜದಲ್ಲಿ ಯಾರಾದರೂ ಸಜ್ಜನರು ಅಥವಾ ವಿಚಾರವಂತರಿದ್ದರೆ ಅವರ ಬಗ್ಗೆ ಪ್ರಶ್ನೆ ಕೇಳಿ, ನಾನು ಉತ್ತರಿಸುತ್ತೇನೆ. ಟೀಕೆ-ತರ್ಕಗಳು ಇರಬೇಕು, ಆದರೆ ಇಂತಹವರ ಬಗ್ಗೆಯೂ ಕೇಳುತ್ತೀರಾ?" ಎಂದು ಬೇಸರ ವ್ಯಕ್ತಪಡಿಸಿದರು.
ಡಾ. ಸುಧಾಕರ್ ಉಲ್ಲೇಖಿಸಿ ವ್ಯಂಗ್ಯ: "ಈ ವ್ಯಕ್ತಿಯ ಬಗ್ಗೆ ನನಗೆ ಮೊದಲೇ ಗೊತ್ತಿದ್ದರೆ, ಮಾಜಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ತಂದಾಗ, ಅದರ ಬದಲಿಗೆ ಇಲ್ಲೊಂದು ಹುಚ್ಚಾಸ್ಪತ್ರೆ ತೆಗೆದುಕೊಂಡು ಹೋಗಿ ಅಂತ ಹೇಳುತ್ತಿದ್ದೆ" ಎಂದು ಮಾರ್ಮಿಕವಾಗಿ ಟೀಕಿಸಿದರು. ಅಲ್ಲದೆ, ನನ್ನ ಈ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಡಿ ಎಂದೂ ಮನವಿ ಮಾಡಿದರು.
ಹಿನ್ನೆಲೆ: ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದೇನು?
ಇದಕ್ಕೂ ಮುನ್ನ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ಪ್ರದೀಪ್ ಈಶ್ವರ್, ಏಕವಚನದಲ್ಲೇ ಕಟುವಾದ ಟೀಕೆಗಳನ್ನು ಮಾಡಿದ್ದರು.
"ನೀನು ಯಾವನೋ ದಲಿತರ ನೀಲಿ ಶಾಲಿನ ಬಗ್ಗೆ ಮಾತನಾಡಲು? ನೀನು ಕೇಸರಿ ಶಾಲಿನ ಬಗ್ಗೆ ಮಾತ್ರ ಮಾತನಾಡಿಕೋ. ನೀನು ಒಂದು ಕೇಸರಿ ಶಾಲು ಹಾಕಿಕೊಂಡು ಬಂದರೆ, ನಾವು ಸಾವಿರ ನೀಲಿ ಶಾಲುಗಳನ್ನು ಹಾಕಿಕೊಂಡು ಬರುತ್ತೇವೆ" ಎಂದು ಸವಾಲು ಹಾಕಿದ್ದರು.
"ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಬಗ್ಗೆ ಕೀಳಾಗಿ ಮಾತನಾಡುವುದು, ಮಸೀದಿ ಮುಂದೆ ನಿಂತು ನಿಮ್ಮ ಬಾಯಿ ತೆವಲಿಗೆ ಮಾತನಾಡುತ್ತೀರಿ. ಇಸ್ಲಾಂ ಧರ್ಮದವರು ಈ ದೇಶವನ್ನು ಗೌರವಿಸಿಕೊಂಡು ಹೊಂದಿಕೊಂಡು ಹೋಗುತ್ತಿದ್ದಾರೆ. ದೇಶದ್ರೋಹಿಗಳಿಗೆ ಪಾಸ್ ಕೊಟ್ಟ ಮುಟ್ಟಾಳ, ನೀನು ಕಬರ್ದಾರ್" ಎಂದು ತೀವ್ರವಾಗಿ ಹರಿಹಾಯ್ದಿದ್ದರು.




