ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಿಲ್ಲೆಯ ವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವಂತೆ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್‍ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಕಾರ್ಯದರ್ಶಿ ಕಾಂ.ಸಾತಿ. ಸುಂದರೇಶ್ ಸತ್ಯಾಗ್ರಹ ಉದ್ದೇಶಿಸಿ ಮಾತನಾಡುತ್ತ ವಸತಿ ರಹಿತರಿಗೆ ನಿವೇಶನಗಳನ್ನು ನೀಡಿ ಮನೆಗಳನ್ನು ಕಟ್ಟಿಕೊಳ್ಳಲು ಹಣ ಮಂಜೂರು ಮಾಡದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಮತ್ತಿತರೆ ಪಕ್ಷಗಳನ್ನು ಸೋಲಿಸುವುದಾಗಿ ಪ್ರತಿಜ್ಞೆ ಮಾಡಬೇಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟ ಆರಂಭಗೊಂಡಿದ್ದು, ಮನೆಯಿಲ್ಲದವರೆಲ್ಲಾ ಒಂದಾದರೆ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾವಣೆ ಮಾಡಬಹುದು. ಅಂತಹ ಶಕ್ತಿ ನಿಮ್ಮಲ್ಲಿದೆ ಎಂದು ಕಮ್ಯುನಿಸ್ಟ್ ಕಾರ್ಯಕರ್ತರನ್ನು ಹುರಿದುಂಬಿಸಿದರು.
ರಾಜ್ಯದಲ್ಲಿ 37 ಲಕ್ಷ ಕುಟುಂಬಗಳಿಗೆ ಸ್ವಂತ ಸೂರಿಲ್ಲ. ಏಳು ಕೋಟಿ ಜನಸಂಖ್ಯೆಯಲ್ಲಿ ಎರಡು ಕೋಟಿಯಷ್ಟು ಕಮ್ಯುನಿಸ್ಟ್ ಮತಗಳಿವೆ. ಎಲ್ಲರೂ ಸಂಘಟಿತರಾಗಬೇಕು. ನಿವೇಶನ ಮನೆಗಳಿಗೆ ಅರ್ಜಿ ಹಾಕಿ 25-30 ವರ್ಷಗಳಿಂದಲೂ ಕಾಯುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಇನ್ನು ಬಡವರಿಗೆ ಮನೆಗಳು ಸಿಕ್ಕಿಲ್ಲ. ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಕೆಂಬಾವುಟ ಕೈಯಲ್ಲಿ ಹಿಡಿದ ಮೇಲೆ ನ್ಯಾಯ ಸಿಗಬೇಕು. ಅಲ್ಲಿಯತನಕ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಜಿಲ್ಲೆಯಲ್ಲಿ 2500 ಎಕರೆ ಕಂದಾಯ ಭೂಮಿಯನ್ನು ಗುರುತಿಸಿ ಐವತ್ತು ಸಾವಿರ ನಿವೇಶನಗಳನ್ನು ವಿತರಿಸಬೇಕು. ಹಳ್ಳಿಗಾಡಿನಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಆರು ಲಕ್ಷ ರೂ. ಹಾಗೂ ನಗರ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಎಂಟು ಲಕ್ಷ ರೂ.ಗಳನ್ನು ಸರ್ಕಾರ ಕೊಡಬೇಕು. ಕೇವಲ 1.20 ಲಕ್ಷ ರೂ.ಗಳಿಂದ ಮರಳು ಕೂಡ ಸಿಗುವುದಿಲ್ಲ. ಹೋರಾಟ ಸೋತರೆ ಮನೆಗಳು ಸಿಗುವುದಿಲ್ಲ ಎಂಬ ಜಾಗೃತಿ ನಿಮ್ಮಲ್ಲಿರಬೇಕೆಂದು ಸತ್ಯಾಗ್ರಹಿಗಳನ್ನು ಎಚ್ಚರಿಸಿದರು.
ಸಿಪಿಐ. ರಾಜ್ಯ ಸಹ ಕಾರ್ಯದರ್ಶಿ ಹೆಚ್.ಎಂ.ಸಂತೋಷ್ ಮಾತನಾಡಿ ಜಿಲ್ಲೆಯಲ್ಲಿ ನಿವೇಶನ ಮತ್ತು ಮನೆಗಳಿಲ್ಲದ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಮೊದಲು ಸರ್ಕಾರ ಕಂದಾಯ ಭೂಮಿಯನ್ನು ಗುರುತಿಸಬೇಕು. ಅನೇಕ ವರ್ಷಗಳಿಂದಲೂ ನಿವೇಶನ ಮತ್ತು ಮನೆಗಳಿಗಾಗಿ ಹೋರಾಟ ನಡೆಯುತ್ತಿದೆ. ಆದರೂ ಆಳುವ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಅದಕ್ಕಾಗಿ ಹೋರಾಟ ಚುರುಕುಗೊಳ್ಳಬೇಕಾಗಿದೆ ಎಂದರು.
ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡುತ್ತ ಜಿಲ್ಲೆಯಲ್ಲಿ ಒಂದು ಲಕ್ಷ ಮೂರು ಸಾವಿರಕ್ಕೂ ಹೆಚ್ಚು ವಸತಿ ರಹಿತರಿದ್ದಾರೆ. ನಿವೇಶನ ಹಾಗೂ ಮನೆಗಳಿಗಾಗಿ ಅನೇಕ ಬಾರಿ ಹೋರಾಟಗಳನ್ನು ನಡೆಸಲಾಗಿದೆ. ಜೀವನ ಸಾಗಿಸಲು ಆಗದ ಬಡವರು ಬಾಡಿಗೆ ಮನೆಗಳಲ್ಲಿ ವಾಸಿಸುವುದು ದುಸ್ತರವಾಗಿರುವುದರಿಂದ ರಾಜ್ಯ ಸರ್ಕಾರ ಕೂಡಲೆ ಕಂದಾಯ ಭೂಮಿಗಳನ್ನು ಗುರುತಿಸಿ ಬಡವರು ಮನೆಗಳನ್ನು ಕಟ್ಟಿಸಿಕೊಳ್ಳಲು ನೆರವಾಗಬೇಕು. ಅಲ್ಲಿಯವರೆಗೂ ನಮ್ಮ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಕಾಂ.ಟಿ.ಆರ್.ಉಮಾಪತಿ, ಕಾಂ.ಜಾಫರ್‍ಷರೀಫ್ ಇನ್ನು ಅನೇಕರು ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.
ಕಾಂ.ಹನುಮಂತಪ್ಪ, ಕಾಂ.ಸತ್ಯಕೀರ್ತಿ, ಕಾಂ.ಪೆನ್ನಯ್ಯ, ಕಾಂ.ತಿಪ್ಪಮ್ಮ, ಕಾಂ.ಎನ್.ಸಿ.ಕುಮಾರಸ್ವಾಮಿ, ಕಾಂ.ಅಮೀನಾಭಿ, ಕಾಂ.ಗಿರೀಶ್, ಲೇಪಾಕ್ಷಿ, ರಜಿಯಾ, ಗಿರಿಜಮ್ಮ ಪರ್ವಿನ್‍ಭಾನು ಸೇರಿದಂತೆ ನೂರಾರು ಮಹಿಳೆಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.




