ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನೆಲ, ಜಲ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡಿರುವ ಹೋರಾಟಗಾರರ ಮೇಲೆ ದಾಖಲಾಗಿರುವ ಮೊಕದ್ದಮ್ಮೆಗಳನ್ನು ಈ ಕೂಡಲೇ ವಜಾಗೊಳಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಎಪಿಎಂಸಿಯ ಸಭಾಂಗಣದಲ್ಲಿ ರೈತ ಸಂಘದ ವತಿಯಿಂದ ನಡೆದ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿ ರೈತ ರ ಸಮಸ್ಯೆಗಳಿಗಾಗಿ ಅಹರ್ನಿಷಿ ಹೋರಾಟ ಮಾಡಿ ದುಡಿಯುವ ರೈತ ಮುಖಂಡರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು. ಮಹಾದಾಯಿ ಹೋರಾಟದ ನಡೆಸುವ ಮೂಲಕ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಲು ಕೋಡಿಹಳ್ಳಿ ಚಂದ್ರಶೇಖರ್ ಅವರು ರೈಲು ತಡೆ ನಡೆಸಿ ಹೋರಾಟ ಮಾಡಿದ್ದರು. ರೈತರ ಪರ ಎನ್ನುವ ಸರಕಾರ ರೈತರ ಹೋರಾಟಗಳಲ್ಲಿ ಭಾಗಿಯಾದವರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದಿಲ್ಲ. ಈ ಹಿಂದೆ ದೊಡ್ಡಬಳ್ಳಾಪುರದಲ್ಲೂ ಕೂಡ ಅನೇಕ ಬಾರಿ ರೈಲು ತಡೆ ನಡೆಸಿ, ಬಂಧನಕ್ಕೆ ಒಳಗಾಗಿದ್ದರು. ದೇಶಕ್ಕೆ ಆಹಾರ ಭದ್ರತೆ ಪ್ರಮುಖವಾಗಿದೆ. ಆಹಾರ ಉತ್ಪಾದನೆ ಮಾಡುವವ ರೈತರೇ ವಿಐಪಿಗಳು. ರೈತ ಹೋರಾಟಗಾರರಿಗೆ ಗೈರು ಹಾಜರಿಯಲ್ಲಿಯೇ ನ್ಯಾಯ ಸಿಗುವ ವಿಶ್ವಾಸವನ್ನು ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಹೊಂದಿದ್ದರು. ಸರಕಾರ ಎಚ್ಚೆತ್ತುಕೊಂಡು ಅವರನ್ನು ಬಿಡುಗಡೆಗೊಳಿಸಬೇಕು. ಇದಕ್ಕಾಗಿ ಸರಕಾರದ ಗಮನ ಸೆಳೆಯಯಲು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಮೌನ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು .
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ, ರೈತ ಹೋರಾಟಗಾರರಾದ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಮಹಾದಾಯಿಗಾಗಿ ಅನೇಕ ವರ್ಷಗಳ ನಿರಂತರ ಹೋರಾಟ ಮಾಡಲಾಗಿತ್ತು. ನಾಡಿನ ರೈತರ ಹಿತಕ್ಕಾಗಿ ರೈಲು ತಡೆ ನಡೆಸಿದ್ದಾರೆ. ನಾವು ಕಾನೂನು ಸಂವಿಧಾನಕ್ಕೆ ಗೌರವ ನೀಡುತ್ತೇವೆ. ಮೊದಲು ರೈತರ ಪರ ಧ್ವನಿಯಾಗಿರುವ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಬಿಡುಗಡೆ ಮಾಡಬೇಕು. ಸರಕಾರ ಹೋರಾಟಗಾರರ ಪರ ನಿಲ್ಲಬೇಕು ಎಂದರು.
ಸುದ್ದಿ ಗೋಷ್ಠಿಯಲ್ಲಿ ರೈತ ಮುಖಂಡರಾದ ಹನುಮೇಗೌಡ, ಸತೀಶ್, ಮುತ್ತೇಗೌಡ, ಕನ್ನಡ ಪಕ್ಷದ ಮುಖಂಡರಾದ ಡಿ.ಪಿ ಆಂಜನೇಯ, ವೆಂಕಟೇಶ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹಾಜರಿದ್ದರು.




