ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ 2003ರ ಕುಖ್ಯಾತ ರಿಂಗ್ ರೋಡ್ ಗಿರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳು ಕಾನೂನಿನ ಮೂಲಕ ಪಡೆದುಕೊಳ್ಳಲು ಯತ್ನಿಸಿದ್ದ ಮತ್ತೊಂದು ಅವಕಾಶ ಕೈತಪ್ಪಿದೆ. ಭಾವಿ ಪತಿ ಗಿರೀಶ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಮುಖ ಅಪರಾಧಿ ಶುಭಾ ಶಂಕರನಾರಾಯಣ ಹಾಗೂ ಸಹ-ಅಪರಾಧಿ ಡಿ. ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ಅಧಿಕೃತವಾಗಿ ತಿರಸ್ಕರಿಸಿದೆ.
ಅಕ್ಟೋಬರ್ 15ರ ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, "ಅಪರಾಧಿಗಳು ಸಲ್ಲಿಸಿರುವ ಕ್ಷಮಾದಾನ ಅರ್ಜಿಯು ಇಲ್ಲಿನ ಕಾನೂನು ಚೌಕಟ್ಟಿನ ಒಳಗೆ ಬರುವುದಿಲ್ಲ. ಹೀಗಾಗಿ ಸಚಿವ ಸಂಪುಟವು ಈ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದು, ಈ ಕುರಿತು ರಾಜ್ಯಪಾಲರಿಗೆ ಅಧಿಕೃತ ಮಾಹಿತಿ ನೀಡಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪುಟ ಸಭೆಯಲ್ಲಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಆಹ್ವಾನಿಸಿ ಈ ಪ್ರಕರಣದ ಕಾನೂನಾತ್ಮಕ ಅಂಶಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ ಬಳಿಕವೇ ಈ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಏನಿದು ರಿಂಗ್ ರೋಡ್ ಕೊಲೆ ಪ್ರಕರಣ?
2003ರ ನವೆಂಬರ್ 30ರಂದು ಸಾಫ್ಟ್ವೇರ್ ಉದ್ಯೋಗಿ ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿನಿ ಶುಭಾ ಶಂಕರನಾರಾಯಣ ಅವರ ವಿವಾಹ ನಿಶ್ಚಯವಾಗಿತ್ತು. ಆದರೆ, ಶುಭಾ ತನ್ನ ಕಾಲೇಜಿನ ಜೂನಿಯರ್ ವಿದ್ಯಾರ್ಥಿ ಅರುಣ್ ವರ್ಮಾ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಅರುಣ್ ಜೊತೆ ಮದುವೆಯಾಗುವ ಉದ್ದೇಶದಿಂದಲೇ ಶುಭಾ ತನ್ನ ಭಾವಿ ಪತಿ ಗಿರೀಶ್ ಕೊಲೆಗೆ ಸಂಚು ರೂಪಿಸಿದ್ದರು.
ಯೋಜನೆಯಂತೆ 2003ರ ಡಿಸೆಂಬರ್ 3ರಂದು ರಾತ್ರಿ ಗಿರೀಶ್ ಅವರನ್ನು ಊಟಕ್ಕೆ ಕರೆದೊಯ್ದಿದ್ದ ಶುಭಾ, ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ವಿಮಾನಗಳ ಹಾರಾಟ ವೀಕ್ಷಿಸುವ ಆಸೆ ವ್ಯಕ್ತಪಡಿಸಿ ರಿಂಗ್ ರೋಡ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಮಾಸ್ಟರ್ ಪ್ಲಾನ್ ಪ್ರಕಾರ ಅರುಣ್ ವರ್ಮಾ ಹಾಗೂ ಇತರೆ ಸಹಚರರು ಬೈಕ್ನ ಶಾಕ್ ಅಬ್ಸಾರ್ಬರ್ನಿಂದ ಗಿರೀಶ್ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಗಿರೀಶ್ ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಆರಂಭದಲ್ಲಿ ಇದೊಂದು ದರೋಡೆ ಅಥವಾ ಅಪರಿಚಿತರ ದಾಳಿ ಎಂದು ಬಿಂಬಿಸಲು ಯತ್ನಿಸಲಾಗಿದ್ದರೂ, ಅಂದಿನ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಎ. ನಾನಯ್ಯ ಅವರು ಮೊಬೈಲ್ ಕರೆಗಳ ವಿವರ ಆಧರಿಸಿ ನಡೆಸಿದ ಚುರುಕಿನ ತನಿಖೆಯಿಂದ ಕರಾಳ ಸತ್ಯ ಹೊರಬಂದಿತ್ತು. ಪ್ರಕರಣದಲ್ಲಿ ಶುಭಾ, ಪ್ರಿಯಕರ ಅರುಣ್ ವರ್ಮಾ ಹಾಗೂ ಇತರೆ ಸಹಚರರಾದ ವೆಂಕಟೇಶ್ ಮತ್ತು ದಿನೇಶ್ ಅವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ನಾಲ್ವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಕಾನೂನು ಹೋರಾಟ ವಿಫಲ, ಈಗ ರಾಜ್ಯಪಾಲರ ಅಂಗಳದಿಂದಲೂ ರಿಜೆಕ್ಟ್ ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಜುಲೈ 2025ರಲ್ಲಿ ಸುಪ್ರೀಂ ಕೋರ್ಟ್ ನಾಲ್ವರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು ಅಂತಿಮ ತೀರ್ಪು ನೀಡಿತ್ತು. ನ್ಯಾಯಾಲಯದ ಎಲ್ಲಾ ಕಾನೂನು ಬಾಗಿಲುಗಳು ಮುಚ್ಚಿದ ಬಳಿಕ, ಅಪರಾಧಿಗಳು ಕೊನೆಯ ಅಸ್ತ್ರವಾಗಿ ರಾಜ್ಯಪಾಲರ ಮುಂದೆ 'ಕ್ಷಮಾದಾನ ಅರ್ಜಿ' ಸಲ್ಲಿಸಿದ್ದರು. ನಿಯಮದಂತೆ ರಾಜ್ಯಪಾಲರು ಈ ಅರ್ಜಿಯನ್ನು ಅಭಿಪ್ರಾಯಕ್ಕಾಗಿ ರಾಜ್ಯ ಸರ್ಕಾರಕ್ಕೆ ರವಾನಿಸಿದ್ದು, ಇದೀಗ ಸಂಪುಟ ಸಭೆಯಲ್ಲಿ ಈ ಅರ್ಜಿ ಅಧಿಕೃತವಾಗಿ ತಿರಸ್ಕೃತಗೊಂಡಿದೆ.



