ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ತಾಲ್ಲೂಕಿನ ಚಿಕ್ಕೋಬನಹಳ್ಳಿಯ ಆಶ್ರಿತ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್. ನಾಗರಾಜ್ ಅವರು ಮಕ್ಕಳ ಹಕ್ಕುಗಳ ಸಂರಕ್ಷಣಾ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಕಳೆದ 30 ವರ್ಷಗಳಿಂದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ನಾಗರಾಜ್ ಅವರು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಆಶ್ರಿತ ಸಂಸ್ಥೆಯ ಮೂಲಕ ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹ ತಡೆಗಟ್ಟುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿದ್ದ ನೂರಾರು ಬಾಲಕಾರ್ಮಿಕರನ್ನು ರಕ್ಷಿಸಿ ಶಿಕ್ಷಣದ ಮುಖ್ಯವಾಹಿನಿಗೆ ತಂದಿರುವುದಲ್ಲದೆ, ಸಂಸ್ಥೆಯ ವತಿಯಿಂದ ಮಕ್ಕಳ ಮನೆ ಶೈಕ್ಷಣಿಕ ವಸತಿ ಕೇಂದ್ರ ತೆರೆದು ಅವರಿಗೆ ಪುನರ್ವಸತಿ ಕಲ್ಪಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಹಲವು ಬಾಲ್ಯವಿವಾಹಗಳನ್ನು ತಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ನವದೆಹಲಿಯಲ್ಲಿ ಜರುಗಿದ ಮಕ್ಕಳ ಹಕ್ಕುಗಳ ಸಂರಕ್ಷಕ ಸಂಸ್ಥೆಗಳ ಮುಖ್ಯಸ್ಥರ ಕಾರ್ಯಾಗಾರದಲ್ಲಿ, 'ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್' ಸಂಸ್ಥೆಯ ಸಂಸ್ಥಾಪಕ ಹಾಗೂ ಜಾಗತಿಕ ಮಕ್ಕಳ ಹಕ್ಕುಗಳ ಹೋರಾಟಗಾರ ಭುವನ್ ರಿಭು ಅವರು ಎಸ್. ನಾಗರಾಜ್ ಅವರಿಗೆ ರಾಷ್ಟ್ರೀಯ ಪುರಸ್ಕಾರ ಹಾಗೂ ಪಾರಿತೋಷಕ ನೀಡಿ ಅಭಿನಂದಿಸಿದರು.
ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ಎಸ್. ನಾಗರಾಜ್ ಅವರಿಗೆ ಆಶ್ರಿತ ಸಂಸ್ಥೆಯ ಜಿಲ್ಲಾ ಸಂಯೋಜಕ ಡಿ.ಒ. ಮುರಾರ್ಜಿ ಹಾಗೂ ಚಿಕ್ಕೋಬನಹಳ್ಳಿ ಗ್ರಾಮಸ್ಥರಾದ ಗೊಂಚಿಗಾರ್ ಮಲ್ಲಿಕಾರ್ಜುನ್ ಸ್ವಾಮಿ, ಓ. ವಸಂತ್ ಕುಮಾರ್, ಡಿ. ಗಂಗಪ್ಪ, ಸಿ.ಬಿ. ಕೊಲ್ಲಪ್ಪ, ಜಿ.ಬಿ. ಸಣ್ಣಬೋಸಯ್ಯ, ಎಂ.ಬಿ. ಸಿದ್ದೇಶ್, ಪಿ.ವಿ. ಶರಣಪ್ಪ, ಜಿನ್ನದ ರೇವಣ್ಣ, ಓ. ಕರಿಬಸಪ್ಪ, ಎನ್. ನುಂಕೇಶ್, ಬಿ. ಗುರುಮೂರ್ತಿ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.



