ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಂಧಿ ಜಯಂತಿ ಹಾಗೂ ಸಾಲು ಸಾಲು ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ತಮ್ಮ ಸ್ವಗ್ರಾಮಗಳಿಗೆ ತೆರಳುವ ಸಾರ್ವಜನಿಕರ ಪ್ರಯಾಣವನ್ನು ಸುಗಮಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಒಟ್ಟು 150 ವಿಶೇಷ ಬಸ್‌ಗಳನ್ನು ನಿಯೋಜಿಸಲಾಗಿದ್ದು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ 10ಕ್ಕೂ ಹೆಚ್ಚು ಊರುಗಳಿಗೆ ಈ ಬಸ್‌ಗಳು ಸಂಚಾರ ನಡೆಸಲಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಮೇಲಿನ ಪ್ರಯಾಣಿಕರ ಒತ್ತಡವನ್ನು ತಗ್ಗಿಸಲು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಬಿಎಂಟಿಸಿ ಈ ವಿಶೇಷ ಕ್ರಮ ಕೈಗೊಂಡಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಹಾಗೂ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣಗಳಿಂದ ಈ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ಬಸ್ ನಿಲ್ದಾಣವಾರು ವಿವರ ಹಾಗೂ ಮಾರ್ಗಗಳು:
೧. ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) – ಒಟ್ಟು 100 ಬಸ್‌ಗಳು:
ಗುರುವಾರ ರಾತ್ರಿ 8:00 ಗಂಟೆಯ ನಂತರ ಕೆಳಗಿನ ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿವೆ:
ಶಿವಮೊಗ್ಗ: 20 ಬಸ್‌ಗಳು, ಹಾಸನ: 15 ಬಸ್‌ಗಳು, ದಾವಣಗೆರೆ: 10 ಬಸ್‌ಗಳು, ಚಿತ್ರದುರ್ಗ: 10 ಬಸ್‌ಗಳು, ಚಿಕ್ಕಮಗಳೂರು: 10 ಬಸ್‌ಗಳು, ಧರ್ಮಸ್ಥಳ: 10 ಬಸ್‌ಗಳು, ಹೊಸದುರ್ಗ: 10 ಬಸ್‌ಗಳು, ಬಳ್ಳಾರಿ: 10 ಬಸ್‌ಗಳು, ಹೊಸಪೇಟೆ: 05 ಬಸ್‌ಗಳು.
೨. ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ – ಒಟ್ಟು 50 ಬಸ್‌ಗಳು: ಗುರುವಾರ ಸಂಜೆ 5:00 ಗಂಟೆಯ ನಂತರ ಕೆಳಗಿನ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಿವೆ:
ಮೈಸೂರು: 25 ಬಸ್‌ಗಳು, ಮಳವಳ್ಳಿ / ಕೊಳ್ಳೇಗಾಲ: 25 ಬಸ್‌ಗಳು. ನಿಲ್ದಾಣಗಳಲ್ಲಿ ಹಿರಿಯ ಅಧಿಕಾರಿಗಳ ಸಮನ್ವಯ:
ಸಾಲು ಸಾಲು ರಜೆಗಳಿರುವ ಕಾರಣ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನು ಮನಗಂಡು ಬಿಎಂಟಿಸಿಯ ವಿಭಾಗೀಯ ಸಂಚಾರ ಅಧಿಕಾರಿಗಳು ಸ್ಥಳದಲ್ಲೇ ಹಾಜರಿರಲಿದ್ದಾರೆ. ಕೆಎಸ್‌ಆರ್‌ಟಿಸಿಯ ನಿಯಂತ್ರಣಾಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ತಕ್ಷಣವೇ ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಲು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ವ್ಯವಸ್ಥೆಯಿಂದಾಗಿ ಹಬ್ಬ ಹಾಗೂ ದೀರ್ಘ ರಜೆಗಳ ಸಂದರ್ಭದಲ್ಲಿ ಊರುಗಳಿಗೆ ತೆರಳುವ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸೀಟುಗಳ ಕೊರತೆ ನೀಗಿ, ಯಾವುದೇ ಕಿರಿಕಿರಿ ಇಲ್ಲದೆ ನಿರಾಳವಾಗಿ ಪ್ರಯಾಣಿಸಲು ಸಹಕಾರಿಯಾಗಲಿದೆ.




