ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಆಕ್ಷೇಪಾರ್ಹ ಹಾಗೂ ಸುಳ್ಳು ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿಕೊಂಡು, ವಿಡಿಯೋ ಹಂಚಿಕೊಂಡಿದ್ದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ: ಸ್ಟಿಂಗ್ ವಿಡಿಯೋ ವದಂತಿ ಹಬ್ಬಿದ ಬೆನ್ನಲ್ಲೇ ನ್ಯಾಯಾಲಯದ ಮೊರೆಹೋಗಿದ್ದ ಸಿದ್ದರಾಮಯ್ಯ, ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿದ್ದರು. ಅಲ್ಲದೆ, ಸುಳ್ಳು ಮಾಹಿತಿ ಹರಡುತ್ತಿದ್ದ ನಿರ್ದಿಷ್ಟ ಸಾಮಾಜಿಕ ಜಾಲತಾಣ ಖಾತೆಗಳ ಐಪಿ ವಿವರಗಳನ್ನೂ ಪೊಲೀಸರಿಗೆ ಒದಗಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇಬ್ಬರು ಶಂಕಿತರನ್ನು ಪ್ರತ್ಯೇಕ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
42 ಮಾಧ್ಯಮಗಳಿಗೆ ಕೋರ್ಟ್ ತಡೆಯಾಜ್ಞೆ: ಆಕ್ಷೇಪಾರ್ಹ ವಿಡಿಯೋ ಪ್ರಕಟಿಸದಂತೆ ನಿರ್ಬಂಧ ವಿಧಿಸಲು ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಸೆಷನ್ಸ್ನ್ಯಾಯಾಲಯವು, 42 ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣ ಖಾತೆಗಳಿಗೆ ತಾತ್ಕಾಲಿಕ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶ ಹೊರಬಿದ್ದ ತಕ್ಷಣವೇ ಎಚ್ಚೆತ್ತ ಹಲವು ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಆ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.
ಸಿದ್ದರಾಮಯ್ಯ ಪ್ರತಿಕ್ರಿಯೆ: ಈ ಬೆಳವಣಿಗೆಯ ಕುರಿತು ಸ್ಪಷ್ಟನೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿದ್ದು, ರಾಜಕೀಯ ಜೀವನದಲ್ಲಿ ಎಂದಿಗೂ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿಲ್ಲ ಎಂದಿದ್ದಾರೆ. ಆದರೆ, ಕೆಲವರು ಇದರ ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಅನಿವಾರ್ಯವಾಗಿ ನ್ಯಾಯಾಲಯದ ತಡೆಯಾಜ್ಞೆ ತರಬೇಕಾಯಿತು ಎಂದು ತಿಳಿಸಿರುವ ಅವರು, ಈ ಬಗ್ಗೆ ತಮಗೆ ವಿಷಾದವಿದೆ ಎಂದಿದ್ದಾರೆ.
ಜೊತೆಗೆ, "ಸ್ಟಿಂಗ್ಆಪರೇಷನ್ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಗರ ಪೊಲೀಸ್ಆಯುಕ್ತರಿಗೆ ದೂರು ನೀಡಿದ್ದೇನೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವಿದೆ. ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಚಾರ ಮಾಡದೆ ಸತ್ಯದ ಪರವಾಗಿ ನಿಲ್ಲಬೇಕು," ಎಂದು ಮನವಿ ಮಾಡಿದ್ದಾರೆ.



