ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಸೋಶಿಯಲ್ ಮೀಡಿಯಾ ನಂಟು: ದೊಡ್ಡಬಳ್ಳಾಪುರದಲ್ಲಿ ಯುವಕನ ಬಂಧನ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಅವರ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಯುವಕನೊಬ್ಬನನ್ನು ದೊಡ್ಡಬಳ್ಳಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (25) ಬಂಧಿತ ಆರೋಪಿ.
ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ (Central IB) ನೀಡಿದ ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಅಂಶಗಳು: ಪಾಕ್ ಗ್ಯಾಂಗ್‌ಸ್ಟರ್‌ಗಳ ರೀಲ್ಸ್‌ಗೆ ಲೈಕ್ಸ್, ಸ್ಟೇಟಸ್: ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸೈಯದ್ ಅಬೂಬಕರ್, 'sayedabudakar313' ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದ. ಈತ ಪಾಕಿಸ್ತಾನದ 'Hammadmemon 333' ಎಂಬ ಖಾತೆಯಿಂದ ಪೋಸ್ಟ್ ಆಗುತ್ತಿದ್ದ ಗ್ಯಾಂಗ್‌ಸ್ಟರ್‌ಗಳ ವಿಡಿಯೋ ರೀಲ್ಸ್‌ಗಳಿಗೆ ಲೈಕ್ ಮಾಡಿ, ಅವುಗಳನ್ನು ತನ್ನ ಖಾತೆಯಲ್ಲಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದ.
ಐಡಿ ಕಾರ್ಡ್ ಶೇರ್ & ಪಿಸ್ತೂಲ್ ಪ್ರೇಮ: ತನಿಖೆ ವೇಳೆ ಆರೋಪಿಯು ತನ್ನ ಗುರುತಿನ ಚೀಟಿಯನ್ನು (ID Card) ಪಾಕಿಸ್ತಾನದ ಇನ್‌ಸ್ಟಾಗ್ರಾಂ ಖಾತೆಯೊಂದಿಗೆ ಹಂಚಿಕೊಂಡಿರುವುದು ಪತ್ತೆಯಾಗಿದೆ. ಅಲ್ಲದೆ, ಈತನ ಮೊಬೈಲ್‌ನಲ್ಲಿ ಹಲವು ಪಿಸ್ತೂಲ್ ಹಾಗೂ ಬಂದೂಕುಗಳ ಫೋಟೋಗಳು ಪತ್ತೆಯಾಗಿದ್ದು, ಶಸ್ತ್ರಾಸ್ತ್ರಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವುದು ಕಂಡುಬಂದಿದೆ.
ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ: ಆ.20ರಂದು ಬಾತ್ಮೀದಾರರ ಮಾಹಿತಿಯಂತೆ ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಸೂಕ್ತ ಉತ್ತರ ನೀಡದೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಆತನನ್ನು ವಶಕ್ಕೆ ಪಡೆದು ಮೊಬೈಲ್ ಪರಿಶೀಲಿಸಿದಾಗ ಪಾಕ್ ನಂಟಿನ ಸತ್ಯಾಂಶ ಹೊರಬಂದಿದೆ.
ದೇಶದ್ರೋಹದ ಕೃತ್ಯದ ಶಂಕೆ - ಬಿಎನ್‌ಎಸ್ ಅಡಿ ಕೇಸ್:
ಆರೋಪಿಯು ಮುಂದಿನ ದಿನಗಳಲ್ಲಿ ದೇಶದ ವಿರುದ್ಧ ಯುವಕರನ್ನು ಎತ್ತಿಕಟ್ಟುವ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎಂಬ ಶಂಕೆಯ ಮೇಲೆ,
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 113(3) ಹಾಗೂ 197(2) ಅಡಿಯಲ್ಲಿ ಪ್ರಕರಣ (ಎಫ್‌ಐಆರ್ ಸಂಖ್ಯೆ 90/2026) ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.



