ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರವು ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಡೆಯಾಜ್ಞೆ (ಸ್ಟೇ) ತಂದಿರುವುದನ್ನು ವಿರೋಧ ಪಕ್ಷಗಳು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮುಗಿದರೂ ಅವರನ್ನು ಬಿಡುತ್ತಿಲ್ಲ, ಸೈಲೆಂಟ್ ಆಗಿದ್ದರೂ ಅವರನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿರುವ ವಿಪಕ್ಷಗಳು, ಕಾಂಗ್ರೆಸ್‌ನ ನಿಜವಾದ ಸಂಸ್ಕೃತಿ ಏನು ಎಂಬುದು ಈಗ ಅರ್ಥವಾಗುತ್ತಿದ್ದು, ಈ ಕುರಿತು ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಮೌನ ಮುರಿಯಬೇಕು ಎಂದು ಒತ್ತಾಯಿಸಿವೆ.
'ಸಿದ್ದರಾಮಯ್ಯನವರೇ ನಿಮ್ಮ ಹಳೇ ಧ್ವನಿ ಎತ್ತಿ': ಹೆಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಹಾವೃತಿಗೆ ಫುಲ್ ಸ್ಟಾಪ್ ಹಾಕಬೇಕು. ಅದಕ್ಕಾಗಿ ನಿಮ್ಮ ಹಳೇ ಧ್ವನಿಯನ್ನು ಒಮ್ಮೆ ಎತ್ತಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ. ತಾವು ಸಿದ್ದರಾಮಯ್ಯ ಅವರ ಪರ ಅನುಕಂಪ ತೋರಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ಕುಟುಂಬವೂ ಈ ಹಿಂದೆ ನೋವು ಅನುಭವಿಸಿರುವುದರಿಂದ ಅವರ ಪರ ನಿಂತಿದ್ದೇನೆ ಎಂದಿದ್ದಾರೆ. ಇದು ಅನುಕಂಪಕ್ಕಾಗಿ ಹೇಳುತ್ತಿಲ್ಲ ಬದಲಿಗೆ ಅವರಲ್ಲಿ ಅಹಿಂದ ಧ್ವನಿ ಇದೆ, 8 ವರ್ಷಗಳ ಕಾಲ ರಾಜ್ಯವನ್ನಾಳಿದವರಿಗೆ ಹೋರಾಟ ಮಾಡುವ ಶಕ್ತಿ ಇಲ್ಲವೇ? ಹೆದರಬೇಕಾದ ಅಗತ್ಯವಿಲ್ಲ, ಹಾಗಿದ್ದರೂ ಯಾಕೆ ಸ್ಟೇ ತೆಗೆದುಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೆ ಒಳ್ಳೆಯದು: ಆರ್.ಅಶೋಕ್
ಸ್ಟಿಂಗ್ ಆಪರೇಷನ್ ವಿಚಾರವಾಗಿ ನನಗೂ ನೋವಾಗಿದೆ. ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದವರು ಹಾಗೂ ಅಧಿಕಾರವನ್ನು ತ್ಯಾಗ ಮಾಡಿದಂತಹ ನಾಯಕನಿಗೆ ಇಂದು ಕೋರ್ಟ್ ಮೆಟ್ಟಿಲು ಹತ್ತುವ ದುಸ್ಥಿತಿ ಬಂದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಲಾಗಿದೆ ಎಂದು ಸ್ವತಃ ಅವರೇ ಹೇಳಿದ್ದು, ಅಂತಹ ಹಿರಿಯ ನಾಯಕ ಈ ದಯನೀಯ ಸ್ಥಿತಿಗೆ ಬಂದಿರುವುದು ನೋವು ತಂದಿದೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಕೂಡಲೇ ಎಫ್‌ಐಆರ್ ದಾಖಲಾಗಬೇಕು ಎಂದು ಆಗ್ರಹಿಸಿರುವ ಅವರು, ಸಚಿವ ರಾಜಣ್ಣ ಸದನದಲ್ಲಿ ಚೀಟಿ ಕಳುಹಿಸಿದ್ದರಿಂದಲೇ ತಾವು ಅದನ್ನು ಪ್ರಸ್ತಾಪಿಸಿದ್ದೆವು, ಆದರೆ ನಂತರ ಅವರು ಯುಟರ್ನ್ ಹೊಡೆದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ತೊರೆದರೆ ಒಳ್ಳೆಯದು ಎಂದೂ ಅವರು ಸಲಹೆ ನೀಡಿದ್ದಾರೆ.
'ತಂದೆ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ': ಸಚಿವ ಯತೀಂದ್ರ ಪ್ರತಿಕ್ರಿಯೆ
ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ತಮ್ಮ ತಂದೆಯವರ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿರುವ ಕಾರಣದಿಂದಲೇ ಕಾನೂನು ರಕ್ಷಣೆಗಾಗಿ ಸ್ಟೇ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂದಿನ ರಾಜಕಾರಣದ ವ್ಯವಸ್ಥೆ ಹಾಳಾಗಿದೆ, ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದಿರುವ ಅವರು, ತಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ಬೇಸರವಿಲ್ಲ. ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುವಂತೆ ತಮಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಯಾವುದೇ ನಿಗದಿತ ಅಧಿಕೃತ ಕಾರ್ಯಕ್ರಮಗಳಿಲ್ಲದಿದ್ದರೂ ಮೈಸೂರಿಗೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ನೂತನ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ವಿಶ್ರಾಂತಿಯಲ್ಲಿದ್ದಾರೆ.



