ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ 'ಕಾವೇರಿ' ಪ್ರಸ್ತುತ ರಾಜ್ಯ ರಾಜಕೀಯದ ಪ್ರಮುಖ ಚಟುವಟಿಕೆಗಳ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ವಿಪಕ್ಷ ಬಿಜೆಪಿ ನಾಯಕರು ಸಾಲು ಸಾಲಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿರುವುದು ರಾಜ್ಯ ರಾಜಕೀಯ ಅಂಗಳದಲ್ಲಿ ತೀವ್ರ ಕುತೂಹಲ ಹಾಗೂ ನಾನಾ ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ.
ಸಿ.ಟಿ. ರವಿ ಹಠಾತ್ ಭೇಟಿ: ಸಿದ್ದರಾಮಯ್ಯ ಅವರ ವಿರುದ್ಧ ಸದಾ ರಾಜಕೀಯವಾಗಿ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಬುಧವಾರ ದಿಢೀರನೇ 'ಕಾವೇರಿ'ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ರಾಜಕೀಯ ವೈರಿಗಳಂತಿದ್ದ ಉಭಯ ನಾಯಕರ ಈ ಭೇಟಿ ಎಲ್ಲರ ಗಮನ ಸೆಳೆದಿತ್ತು.

ರಮೇಶ್ ಜಾರಕಿಹೊಳಿ-ಸಿದ್ದರಾಮಯ್ಯ ನಡುವೆ ಸುದೀರ್ಘ ಚರ್ಚೆ: ಇದರ ಬೆನ್ನಲ್ಲೇ ಗುರುವಾರ ಬೆಳಿಗ್ಗೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದರು. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಮೇಶ್, ತರುವಾಯ ಬಿಜೆಪಿ ಸೇರ್ಪಡೆಯಾಗಿದ್ದರು.
ಪ್ರಸ್ತುತ ಬಿಜೆಪಿಯಲ್ಲಿದ್ದರೂ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ರಮೇಶ್ ಜಾರಕಿಹೊಳಿ ಅವರ ಈ ನಡೆ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ರಮೇಶ್ ಜೊತೆಗೆ ಬಿಜೆಪಿಯ ಮತ್ತೊಬ್ಬ ಪ್ರಮುಖ ನಾಯಕ ರಾಜೂಗೌಡ ಅವರೂ ಸಹ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಇದು ವೈಯಕ್ತಿಕ ಭೇಟಿ ಎನ್ನಲಾಗುತ್ತಿದ್ದರೂ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ.
ಹೆಚ್ಚಿದ ‘ಕಾವೇರಿ’ ನಿವಾಸದ ಕಳೆ:
ಸಿದ್ದರಾಮಯ್ಯ ಅವರು ಅಧಿಕಾರದಲ್ಲ ಇಲ್ಲದಿದ್ದರೂ ಅವರ ನಿವಾಸದಲ್ಲಿ ರಾಜಕೀಯ ಕಳೆ ಕಡಿಮೆಯಾಗಿಲ್ಲ. ಬಿಜೆಪಿಯ ಶಾಸಕರು ಮಾತ್ರವಲ್ಲದೆ, ರಾಜ್ಯ ಸರ್ಕಾರದ ಸಚಿವರಾದ ನರೇಂದ್ರ ಸ್ವಾಮಿ, ಶಾಸಕ ಶಿವಲಿಂಗೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಗುರುವಾರ 'ಕಾವೇರಿ'ಗೆ ಆಗಮಿಸಿ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದರು.
ವಿಪಕ್ಷ ನಾಯಕರ ಸರಣಿ ಭೇಟಿಯು ಮುಂಬರುವ ರಾಜಕೀಯ ಬೆಳವಣಿಗೆಗಳ ದಿಕ್ಸೂಚಿಯೇ ಎಂಬ ಪ್ರಶ್ನೆ ಮೂಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.




