ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮುಂಬರುವ ತಾಲೂಕು, ಜಿಪಂ ಚುನಾವಣೆಗಾಗಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಆಕಾಂಕ್ಷಿ ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಅರಳುಮಲ್ಲಿಗೆ ತಾಪಂ ಕ್ಷೇತ್ರದ ಬೆಂಬಲಿಗರೊಂದಿಗೆ ನಡೆದ ಸಭೆಯ ನಂತರ ಅವರು ಮಾತನಾಡಿದರು.
ತಾಲೂಕಿನಲ್ಲಿ ತಾಪಂ, ಜಿಪಂ ಚುನಾವಣೆಗೆ ಸಂಬoಧಿಸಿದ ಮೀಸಲಾತಿ ಘೋಷಣೆಯಾಗಿದ್ದು, ಇದರ ಸಿದ್ದತೆಗಾಗಿ ಪಕ್ಷದ ಸಂಘಟನೆಯನ್ನು ಈ ಹಿಂದಿನoತೆ ನಿರಂತರವಾಗಿ ತೊಡಗಿಸಿಕೊಳ್ಳಲಾಗುತ್ತದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ, ಜನರ ಜತೆಗೆ ಕೆಲಸ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಈ ಹಿಂದೆಯಿoದಲೂ ಕೂಡ ಪಕ್ಷದ ಪರವಾಗಿ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿರುವೆ. ಅರಳುಮಲ್ಲಿಗೆ ತಾಪಂ ಕ್ಷೇತ್ರದಲ್ಲಿ ಎಸ್ಸಿ ಮೀಸಲಾತಿ ಘೋಷಣೆಯಾಗಿದ್ದು, ನನಗೆ ಅವಕಾಶ ನೀಡುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡುತ್ತೇನೆ ಎಂದರು.
ಮೂಲಸೌಕರ್ಯಕ್ಕೆ ಆದ್ಯತೆ ನೀಡುವುದೇ ಗುರಿ: ತಾಪಂ ಚುನಾವಣೆಯ ಸಿದ್ದತೆ ಭಾಗವಾಗಿ ಕಾರ್ಯಕರ್ತರನ್ನು ಭೇಟಿ ಮಾಡಿ, ಅವರೊಂದಿಗೆ ಚರ್ಚಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿ, ಸಹಕಾರ ಪಡೆಯಲಾಗುತ್ತದೆ. ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಜನರು ಕೂಡ ನನಗೆ ವಿಶ್ವಾಸಹೊಂದಿದ್ದು, ಜನಪರ ಕೆಲಸ ಮಾಡಲು ಪ್ರಯತ್ನಿಸುತ್ತಿರುವೆ ಎಂದರು.
ಈ ಸಂದರ್ಭದಲ್ಲಿ ಅರಳುಮಲ್ಲಿಗೆ ತಾಪಂ ಕ್ಷೇತ್ರದ ಬೆಂಬಲಿಗರಾದ ಆಂಜಿನಪ್ಪ, ಚೇತನ್, ಬೈಲಪ್ಪ, ಯಲ್ಲಪ್ಪ, ಅಭಿಷೇಕ್ ಸೇರಿದಂತೆ ಅನೇಕರು ಹಾಜರಿದ್ದರು.




