ಚಂದ್ರವಳ್ಳಿ ನ್ಯೂಸ್, ಉಡುಪಿ:
ಜೆಸಿಐ ಉಡುಪಿ ಸಿಟಿ, ವನಸುಮ ವೇದಿಕೆ ಮತ್ತು ವನಸುಮ ಟ್ರಸ್ಟ್ ಸಹಯೋಗದಲ್ಲಿ ವನಸುಮ ಜೆಸಿ ಸಪ್ತಾಹದ ಸಮಾರೋಪ ಸೆ 15 ರಂದು ಸಮಾರಂಭ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ನಡೆಯಿತು.
ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಸಮಾರೋಪ ನುಡಿಗಳನ್ನಾಡಿ, ಜೆಸಿಯಂತಹ ಸಂಸ್ಥೆಗಳ ಮೂಲಕ ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವನಸುಮ ರಂಗ ಸಮ್ಮಾನ್ ಮತ್ತು ರಂಗ ಪುರಸ್ಕಾರವನ್ನು ಪ್ರಧಾನ ಮಾಡಿದರು.
ಡೆಂಟಾ ಕೇರ್ ನ ಡಾ. ವಿಜಯೇಂದ್ರ ವಸಂತ್, ಎಂಪೈರ್ ಎಂಟರ್ಟೈನ್ಮೆಂಟ್ ನ ಜಯಕುಮಾರ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಜೆಸಿಐ ಉಡುಪಿ ಸಿಟಿಯ ಪೂರ್ವ ಅಧ್ಯಕ್ಷರುಗಳು ಹಾಗೂ ವನಸುಮ ವೇದಿಕೆಯ ಹಿರಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜೆಸಿಐ ಅಧ್ಯಕ್ಷೆ ಪಲ್ಲವಿ ಕೊಡಗು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಪ್ತಾಹದ ನಿರ್ದೇಶಕ ಮತ್ತು ವನಸುಮ ಟ್ರಸ್ಟ್ ಅಧ್ಯಕ್ಷ ಹಿರಿಯ ಕಲಾವಿದರಾದ ಬಾಸುಮ ಕೊಡಗು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಪ್ತಾಹದ ಸಮಾರೋಪದಲ್ಲಿ ಖ್ಯಾತ ರಂಗ ನಟ ಎಂ ಎಸ್ ಭಟ್ ಅವರಿಗೆ ವನಸುಮ ರಂಗ ಸಮ್ಮಾನ್ ಮತ್ತು ಯುವ ರಂಗ ನಿರ್ದೇಶಕ ರೋಹಿತ್ ಬೈಕಾಡಿ ಅವರಿಗೆ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಪ್ತಾಹದ ಅಂಗವಾಗಿ ನಡೆದ ಅನ್ಯೂನ್ಯ ದಂಪತಿ ಸ್ಪರ್ಧೆ ಯ ತೀರ್ಪುಗಾರರಾಗಿ ಕಾವ್ಯವಾಣಿ ಕೊಡಗು ಹಾಗೂ ಜಯರಾಮ್ ಸಹಕರಿಸಿದರು. ಸುಮಾರು 30 ದಂಪತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಪ್ರಥಮ ಬಹುಮಾನ ರೂ. ಮುವತ್ತು ಸಾವಿರ ಅನ್ನು ಶೃತಿ ಪ್ರದೀಪ್ ಹಾಗೂ ಪ್ರದೀಪ್ ದಂಪತಿ ದ್ವಿತೀಯ ಬಹುಮಾನ ರೂಪಾಯಿ ಇಪ್ಪತ್ತು ಸಾವಿರವನ್ನು ಜ್ಞಾನಶೀಲ ಶ್ರೀನಿವಾಸ ದಂಪತಿ ತೃತೀಯ ಬಹುಮಾನ ಹತ್ತುಸಾವಿರವನ್ನು ಅನುಪಲ್ಲವಿ ಹಾಗೂ ರೋಹಿತ್ ದಂಪತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ನಾಟಕ, ಗೊಂಬೆ ಯಕ್ಷಗಾನ, ಜಾದು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದಿದ್ದವು.




