ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಟಿ.ವೆಂಕಟರಮಣಯ್ಯ ಸದಸ್ಯರುಗಳಾಗಿ ಬೈರೇಗೌಡ, ಕಂಟನಕುಂಟೆ ಕೃಷ್ಣಮೂರ್ತಿ, ಮುನಿರಾಜು ರವರುಗಳು ಅಧಿಕಾರ ಸ್ವೀಕರಿಸಿದರು.
ನಗರದ ಡಿ. ಕ್ರಾಸ್ ನಲ್ಲಿರುವ ಯೋಜನಾ ಪ್ರಾಧಿಕಾರದ ಕಛೇರಿ ಮುಂಭಾಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರ ಪದಗ್ರಹಣ ನಡೆಯಿತು, ಈ ವೇಳೆ ಹೂಗುಚ್ಛ ನೀಡುವ ಮೂಲಕ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಧ್ಯಕ್ಷರನ್ನು ಹಾಗು ಸದಸ್ಯರನ್ನು ಅಭಿನಂದಿಸಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಪದ ಗ್ರಹಣ ಸ್ವೀಕಾರ ಮಾಡಿದ ಟಿ.ವೆಂಕಟರಮಣಯ್ಯನವರು ಮಾತನಾಡಿ ನಗರಗಳು ಅಡ್ಡಾ ದಿಡ್ಡಿಯಾಗಿ ಬೆಳೆಯುತ್ತಿದ್ದವು, ಇದನ್ನ ಮನಗಂಡ ಸರ್ಕಾರ ನಗರ ಯೋಜನಾ ಪ್ರಾಧಿಕಾರಗಳನ್ನ ಅಸ್ತಿತ್ವಕ್ಕೆ ತಂದಿದೆ.2017ರಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಪ್ರಾರಂಭವಾಗಿದ್ದು ಪ್ರಾಧಿಕಾರದ ಪ್ರಕಾರವಾಗಿ ನಗರಗಳು ವಿಶಾಲವಾದ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರಬೇಕು.
ನಗರದ ವ್ಯವಸ್ಥಿತ ಅಭಿವೃದ್ಧಿ, ಬಡಾವಣೆಗಳ ಅನುಮೋದನೆ, ಕಟ್ಟಡ ಪರವಾನಗಿ ಮತ್ತು ಭೂ ಬಳಕೆಯ ನಿಯಂತ್ರಣ.ರಸ್ತೆಗಳು, ಉದ್ಯಾನವನಗಳು, ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಸರಿಯಾದ ವಿಂಗಡಣೆ ಹಾಗೂ ಮೂಲಭೂತ ಸೌಕರ್ಯಗಳ ಒದಗಿಸುವ ಉದ್ದೇಶದಿಂದ ಯೋಜನಾ ಪ್ರಾಧಿಕಾರ ಜಾರಿಗೆ ತರಲಾಗಿದೆ ಎಂದರು.
ಕಾನೂನು ಪ್ರಕಾರವಾಗಿ ಸದಸ್ಯರು ಸೇರಿದಂತೆ ನಾನು ಆಡಳಿತ ನಡೆಸುವ ಮೂಲಕ ಜನರ ಕೆಲಸ ಮಾಡಲಾಗುತ್ತದೆ. ನಮ್ಮದೆ ಸರ್ಕಾರ ಇದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವೀರಪ್ಪಮೊಯ್ಲಿ ಮಾರ್ಗದರ್ಶನದಲ್ಲಿ ತಾಲೂಕಿನ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದಲ್ಲಿ ಹೆಸರಘಟ್ಟ, ತೂಬಗೆರೆ ಸೇರಿದಂತೆ ತಾಲೂಕಿನ ಹೋಬಳಿಗಳಿದ್ದು, ಪ್ರತಿಯೊಬ್ಬರಿಗೆ ಒಂದೊಂದು ಬಾರಿ ಅವಕಾಶ ನೀಡುವ ಕೆಲಸ ಮಾಡಲಾಗುವುದು, ಇಲ್ಲಿಯವರೆಗೂ ಯಾವುದೇ ಅಪಸ್ವರ ಕೇಳಿ ಬಂದಿಲ್ಲ ಎಂದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಇರುವುದು ನಗರಗಳ ಅಭಿವೃದ್ಧಿಗಾಗಿ ಆದರೆ ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಪ್ರತಿನಿಧಿಗೆ ಅವಕಾಶ ನೀಡಿಲ್ಲವೆಂದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಚುಂಚೇಗೌಡ, ಸದಸ್ಯರಾದ ಅಂಜನಮೂರ್ತಿ, ವೆಂಕಟೇಶ್, ರಾಮಣ್ಣ, ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ರವಿ ಸಿದ್ದಪ್ಪ, ಕೆಸಿಸಿ ಸದಸ್ಯ ಲಕ್ಷ್ಮೀಪತಿ, ಜಂಟಿ ಕಾರ್ಯದರ್ಶಿ ನಾಗರಾಜು ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.



