Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರಾಮಾಣಿಕತೆಗೆ ಸ್ಟಿಂಗ್ ಆಪರೇಶನ್ ಭಯವೇಕೆ?:

ಚಂದ್ರವಳ್ಳಿ ನ್ಯೂಸ್, ಮೈಸೂರು: 
"ಸ್ಟಿಂಗ್ ಆಪರೇಶನ್ ಸಾರ್ವಜನಿಕ ಹಿತದ ಸತ್ಯವನ್ನು ಬಯಲಿಗೆಳೆಯುವ ಜವಾಬ್ದಾರಿಯುತ ಪತ್ರಿಕೋದ್ಯಮದ ಸಾಧನವಾಗಬಹುದು. ಆದರೆ ಅದರ ದೃಶ್ಯಗಳನ್ನು ಸಂದರ್ಭ ಮತ್ತು ಸಾಕ್ಷ್ಯಗಳೊಂದಿಗೆ ಪರಿಶೀಲಿಸಿ ಬಳಸಬೇಕು. ನಿಜವಾದ ಪ್ರಾಮಾಣಿಕತೆ ಕ್ಯಾಮೆರಾ ಎದುರಿನ ವರ್ತನೆಯಲ್ಲ
, ಕ್ಯಾಮೆರಾ ಇಲ್ಲದಾಗಲೂ ನೈತಿಕತೆಯನ್ನು ಕಾಪಾಡಿಕೊಳ್ಳುವ ಬದುಕಿನಲ್ಲಿ ವ್ಯಕ್ತವಾಗುತ್ತದೆ."

ಕುಟುಕು ಕಾರ್ಯಾಚರಣೆಗಳು ನಡೆಯಲಿ. ಮರೆಯಾದ ಸತ್ಯಗಳು ಹೊರಬರಲಿ. ನಯನಾಜೂಕಾಗಿ ಆಡುವ ಮಾತುಗಳ ಹಿಂದಿರುವ ವಾಸ್ತವವೂ ಜನರ ಮುಂದೆ ಅನಾವರಣಗೊಳ್ಳಲಿ. ಪಾರದರ್ಶಕ ಆಡಳಿತ ಮತ್ತು ಪ್ರಾಮಾಣಿಕ ಸೇವೆಯ ಆಶಯ ಹೊಂದಿರುವವರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನ್ಯಾಯಯುತವಾಗಿ ಬದುಕುವ ಹಾಗೂ ಕರ್ತವ್ಯ ನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ನೈತಿಕ ನಿಲುವು ಇದ್ದಾಗ ಏನೇ ಬಂದರೂ ಧೈರ್ಯದಿಂದ ಎದುರಿಸಿ ಮುನ್ನಡೆಯುವ ಆತ್ಮವಿಶ್ವಾಸ ಸಹಜವಾಗಿ ಮೂಡುತ್ತದೆ. ಆದ್ದರಿಂದ ಕುಟುಕು ಕಾರ್ಯಾಚರಣೆಯ ಹೆಸರಿನಲ್ಲಿ ಗಾಬರಿ ಹುಟ್ಟಿಸುವುದಕ್ಕಿಂತ ಸತ್ಯವನ್ನು ಪರಿಶೀಲಿಸಿ ಹೊರತರುವ ಜವಾಬ್ದಾರಿಯುತ ನಡೆ ಮುಖ್ಯ. ಪ್ರಾಮಾಣಿಕ ಬದುಕಿಗೆ ಭಯಕ್ಕಿಂತ ಆತ್ಮವಿಶ್ವಾಸವೇ ದೊಡ್ಡ ಶಕ್ತಿ.

Advertisement

ಪ್ರಾಮಾಣಿಕವಾದ ನಡೆನುಡಿಗೆ ರಹಸ್ಯ ಕ್ಯಾಮೆರಾದ ಭಯ ಏಕೆ ಎಂಬುದು ಈ ನಮ್ಮಯ ಸರಳ ಪ್ರಶ್ನೆ. ಆದರೆ ಇದರ ಒಳಾರ್ಥ ಇನ್ನಷ್ಟು ವಿಶಾಲವಾಗಿದೆ. ಸ್ಟಿಂಗ್ ಆಪರೇಶನ್ ಎಂದರೆ ಯಾರನ್ನಾದರೂ ಸಿಕ್ಕಿಸುವ ಸಾಧನ ಮಾತ್ರವಲ್ಲ. ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ಗಂಭೀರ ವಿಷಯಗಳಲ್ಲಿ ವಾಸ್ತವಾಂಶ ವನ್ನು ಹೊರತರುವ ಪತ್ರಿಕೋದ್ಯಮದ ಒಂದು ವಿಧಾನವಾಗಿಯೂ ಅದು ಬಳಕೆಯಾಗುತ್ತದೆ. ಆದ್ದರಿಂದ ಸ್ಟಿಂಗ್ ಆಪರೇಶನ್ ಕುರಿತು ಮಾತನಾಡು ವಾಗ ಸತ್ಯಶೋಧನೆಯ ಉದ್ದೇಶದ ಜೊತೆಗೆ ಅದರ ಮಿತಿ ಮತ್ತು ಜವಾಬ್ದಾರಿಯನ್ನೂ ಗಮನಿಸಬೇಕು.

ಸತ್ಯದ ದಾರಿಗೆ ಕ್ಯಾಮೆರಾ ಭಯವಿಲ್ಲ
ಪ್ರಾಮಾಣಿಕತೆಗೆ ಮುಖವಾಡದ ಅಗತ್ಯವಿಲ್ಲ
ಸ್ಟಿಂಗ್ ಬಯಲಿಗೆಳೆಯಲಿ ಮರೆವ ಸತ್ಯ
ನೈತಿಕ ಬದುಕಿಗಿಂತ ದೊಡ್ಡ ಶಕ್ತಿ ಇಲ್ಲ.

ಸಮಾಜದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬಹಳ ಮುಖ್ಯ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯಾಗಿರಲಿ ಅಥವಾ ಸಾಮಾನ್ಯ ನಾಗರಿಕನಾಗಿರಲಿ ತನ್ನ ನಡೆನುಡಿಗಳಿಗೆ ತಾನೇ ಜವಾಬ್ದಾರನಾಗಿರುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾರೂ ನೋಡುತ್ತಿಲ್ಲ ಎಂಬ ಕಾರಣಕ್ಕೆ ನಿಯಮವನ್ನು ಮೀರುವ ಮನಸ್ಥಿತಿ ಪ್ರಾಮಾಣಿಕತೆಯ ಲಕ್ಷಣವಲ್ಲ. ಹೊರಗಿನ ಕಣ್ಣು ಇಲ್ಲದಿದ್ದರೂ ಒಳಗಿನ ವಿವೇಕ ತಪ್ಪನ್ನು ತಡೆಯಬೇಕು.

news_1791676916_0_756.webp

 

ಇಲ್ಲಿಯೇ ಒಂದು ಸ್ವರಚಿತ ಗಾದೆ ಮಾತು ಸೂಕ್ತವಾಗಿ ನೆನಪಾಗುತ್ತದೆ. “ಕ್ಯಾಮೆರಾ ಸತ್ಯ ಹಿಡಿಯಬಹುದು ಆದರೆ ಸತ್ಯದ ಬದುಕು ಕ್ಯಾಮೆರಾವನ್ನು ಹುಡುಕುವುದಿಲ್ಲ.” ಇದರ ಅರ್ಥ ಸತ್ಯವನ್ನು ದಾಖಲಿಸಲು ಕ್ಯಾಮೆರಾ ಬೇಕಾಗಬಹುದು. ಆದರೆ ಪ್ರಾಮಾಣಿಕವಾಗಿ ಬದುಕಲು ಸದಾ ಹೊರಗಿನ ಕಣ್ಗಾವಲು ಬೇಕಾಗುವುದಿಲ್ಲ. ವ್ಯಕ್ತಿಯ ನಡತೆ ತನ್ನ ಅಂತರಂಗದ ಜವಾಬ್ದಾರಿಯಿಂದ ರೂಪುಗೊಂಡಾಗ ಕ್ಯಾಮೆರಾ ಇರಲಿ ಇಲ್ಲದಿರಲಿ ನಡೆ ಒಂದೇ ಆಗಿರುತ್ತದೆ.

ಸ್ಟಿಂಗ್ ಆಪರೇಶನ್ ಸಾರ್ವಜನಿಕ ಹಿತದ ಗಂಭೀರ ವಿಷಯವನ್ನು ಬೆಳಕಿಗೆ ತರುವ ಉದ್ದೇಶ ಹೊಂದಿದ್ದರೆ ಅದರ ಹಿಂದೆ ಸತ್ಯಶೋಧನೆಯ ಜವಾಬ್ದಾರಿ ಇರಬೇಕು. ಆದರೆ ಯಾವುದೇ ರಹಸ್ಯ ದೃಶ್ಯವನ್ನು ಕಂಡ ತಕ್ಷಣ ಅದನ್ನೇ ಸಂಪೂರ್ಣ ಸತ್ಯವೆಂದು ತೀರ್ಮಾನಿಸುವುದು ಸೂಕ್ತವಲ್ಲ. ದೃಶ್ಯದ ಹಿನ್ನೆಲೆ ಏನು, ಸಂಭಾಷಣೆ ಯಾವ ಸಂದರ್ಭದಲ್ಲಿ ನಡೆದಿದೆ, ದಾಖಲೆ ಸಂಪೂರ್ಣ ವಾಗಿದೆಯೇ, ಸಂಬಂಧಪಟ್ಟ ವ್ಯಕ್ತಿಯ ವಿವರಣೆ ಏನು ಎಂಬುದನ್ನೂ ಪರಿಶೀಲಿಸಬೇಕು. ಒಂದು ತುಣುಕನ್ನು ಆಧರಿಸಿ ವ್ಯಕ್ತಿಯ ಮೇಲೆ ಅಂತಿಮ ತೀರ್ಪು ನೀಡುವುದು ನ್ಯಾಯಸಮ್ಮತವಲ್ಲ.

ಪತ್ರಿಕೋದ್ಯಮದ ಶಕ್ತಿ ಪ್ರಶ್ನಿಸುವುದರಲ್ಲಿ ಇದೆ. ಅದೇ ಸಮಯದಲ್ಲಿ ಅದರ ಜವಾಬ್ದಾರಿ ಪರಿಶೀಲಿಸುವುದರಲ್ಲಿದೆ. ಸಾರ್ವಜನಿಕ ಹಿತದ ಹೆಸರಿನಲ್ಲಿ ಸತ್ಯವನ್ನು ಹುಡುಕುವ ಪ್ರಯತ್ನ ಸ್ವಾಗತಾರ್ಹವಾದರೂ ವ್ಯಕ್ತಿಯ ಖಾಸಗಿತನ, ಗೌರವ ಮತ್ತು ಕಾನೂನುಬದ್ಧ ಹಕ್ಕುಗಳಿಗೂ ಮೌಲ್ಯವಿದೆ. ಆರೋಪ ಮತ್ತು ಅಪರಾಧ ಸಾಬೀತಾಗಿರುವುದು ಒಂದೇ ಅಲ್ಲ ಎಂಬ ಅರಿವು ಸಾರ್ವಜನಿಕ ಚರ್ಚೆಯಲ್ಲೂ ಇರಬೇಕು.

ಸ್ಟಿಂಗ್ ಆಪರೇಶನ್‌ನ ನೈತಿಕತೆಯ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ. ಈಗಾಗಲೇ ನಡೆಯುತ್ತಿರುವ ತಪ್ಪನ್ನು ದಾಖಲಿಸುವುದು ಮತ್ತು ಯಾರನ್ನಾದರೂ ಪ್ರಚೋದಿಸಿ ತಪ್ಪು ಮಾಡಲು ಒತ್ತಾಯಿಸುವುದು ಒಂದೇ ರೀತಿಯ ಸಂಗತಿಗಳಲ್ಲ. ಸತ್ಯಶೋಧನೆಯ ಹೆಸರಿನಲ್ಲಿ ಅನಗತ್ಯ ಹಸ್ತಕ್ಷೇಪ ನಡೆಯಬಾರದು. ಸಾರ್ವಜನಿಕ ಹಿತ, ಅಗತ್ಯತೆ, ಸಾಕ್ಷ್ಯದ ವಿಶ್ವಾಸಾರ್ಹತೆ ಮತ್ತು ಅನ್ವಯಿಸುವ ಕಾನೂನುಗಳ ಮಿತಿಯನ್ನು ಗೌರವಿಸುವುದು ಅತ್ಯಗತ್ಯ.

ಈ ಸಂದರ್ಭದಲ್ಲಿ ಮತ್ತೊಂದು ಸ್ವರಚಿತ ಸಂದೇಶ ನುಡಿ ಅರ್ಥಪೂರ್ಣವಾಗು ತ್ತದೆ. “ನೋಡುವ ಕಣ್ಣು ಹೊರಗಿರಬಹುದು ಆದರೆ ಪ್ರಾಮಾಣಿಕತೆಯ ಕಣ್ಣು ಒಳಗಿರಬೇಕು.” ಇದರ ಸಂದೇಶ ಸ್ಪಷ್ಟ. ಹೊರಗಿನ ಪರಿಶೀಲನೆಯ ಭಯದಿಂದ ಮಾತ್ರ ತಪ್ಪನ್ನು ದೂರವಿಡುವುದು ಶಾಶ್ವತ ನೈತಿಕತೆ ಅಲ್ಲ. ತಪ್ಪು ಮಾಡುವ ಅವಕಾಶವಿದ್ದರೂ ತಪ್ಪನ್ನು ಮಾಡದಿರುವ ಮನಸ್ಸೇ ನಿಜವಾದ ಪ್ರಾಮಾಣಿಕತೆಯ ಆಧಾರ.

ಸ್ಟಿಂಗ್ ಆಪರೇಶನ್ ಸಮಾಜಕ್ಕೆ ಒಂದು ಪ್ರಶ್ನೆಯನ್ನು ಕೇಳಬಹುದು. ಆದರೆ ಆ ಪ್ರಶ್ನೆಗೆ ಉತ್ತರ ನೀಡುವ ಜವಾಬ್ದಾರಿ ದಾಖಲೆಗಳನ್ನು ನೋಡುವವರಿಗೂ ಇದೆ. ದೃಶ್ಯವೊಂದನ್ನು ನೋಡಿ ತಕ್ಷಣ ಭಾವನಾತ್ಮಕ ತೀರ್ಪು ನೀಡುವುದಕ್ಕಿಂತ ವಾಸ್ತವಾಂಶವನ್ನು ಪರಿಶೀಲಿಸುವುದು ನಾಗರಿಕ ವಿವೇಕದ ಲಕ್ಷಣ. ಮಾಧ್ಯಮ ದ ವರದಿಯನ್ನು ಓದುವಾಗಲೂ ಓದುಗರು ವಿವೇಚನೆಯಿಂದ ಮಾಹಿತಿ ಸ್ವೀಕರಿಸುವುದು ಅಗತ್ಯ.

ಇದರಿಂದ ನೀತಿಯೊಂದು ಹೊರಹೊಮ್ಮುತ್ತದೆ. “ಪತ್ತೆಯಾಗುವ ಭಯದಿಂದ ತಪ್ಪು ಮಾಡದಿರುವುದು ಎಚ್ಚರಿಕೆ. ತಪ್ಪು ಮಾಡುವ ಮನಸ್ಸೇ ಬರದಿರುವುದು ನಿಜವಾದ ಪ್ರಾಮಾಣಿಕತೆ.” ಈ ಮಾತಿನ ಸಾರವೆಂದರೆ ಕಾನೂನಿನ ಭಯ ಸಮಾಜಕ್ಕೆ ಅಗತ್ಯವಾದ ನಿಯಂತ್ರಣ ನೀಡಬಹುದು. ಆದರೆ ವ್ಯಕ್ತಿಯ ಒಳಗಿನ ನೈತಿಕ ಪ್ರಜ್ಞೆ ಬೆಳೆದಾಗ ಮಾತ್ರ ಪ್ರಾಮಾಣಿಕತೆ ಶಾಶ್ವತ ಮೌಲ್ಯವಾಗುತ್ತದೆ.

ಆದುದರಿಂದ “ಪ್ರಾಮಾಣಿಕತೆಗೆ ಸ್ಟಿಂಗ್ ಆಪರೇಶನ್ ಭಯವೇಕೆ?” ಎಂಬ ಪ್ರಶ್ನೆಯನ್ನು ಹಾಸ್ಯದ ಚಟಾಕಿಯಾಗಿ ನೋಡಬಹುದು. ಆದರೆ ಅದರೊಳಗೆ ಗಂಭೀರ ಸಾಮಾಜಿಕ ಪ್ರಶ್ನೆಯೂ ಅಡಗಿದೆ. ಕ್ಯಾಮೆರಾ ಮುಂದೆ ನಿಂತಾಗ ಮಾತ್ರ ಶುದ್ಧವಾಗಿ ಕಾಣಿಸಿಕೊಳ್ಳುವುದು ಪ್ರಾಮಾಣಿಕತೆಯಲ್ಲ. ಯಾರ ಕಣ್ಣಿಗೂ ಬೀಳದ ಸಂದರ್ಭದಲ್ಲಿಯೂ ಸರಿಯಾದ ದಾರಿಯನ್ನು ಆಯ್ಕೆ ಮಾಡುವುದು ನಿಜವಾದ ಶುದ್ಧತೆ. ಅದೇ ವೇಳೆ ಸತ್ಯವನ್ನು ಹುಡುಕುವ ಯಾವುದೇ ಸಾಧನವನ್ನು ವಿವೇಕ, ಪರಿಶೀಲನೆ ಮತ್ತು ಕಾನೂನುಬದ್ಧ ಜವಾಬ್ದಾರಿ ಯೊಂದಿಗೆ ಬಳಸಿದಾಗ ಮಾತ್ರ ಅದು ಸಮಾಜಕ್ಕೆ ಉಪಯುಕ್ತವಾಗುತ್ತದೆ.

ಪ್ರಮುಖವಾಗಿ ಸ್ಟಿಂಗ್ ಆಪರೇಶನ್‌ಗಿಂತ ದೊಡ್ಡದು ವ್ಯಕ್ತಿಯ ಅಂತರಂಗದ ಕನ್ನಡಿ. ಹೊರಗಿನ ಕ್ಯಾಮೆರಾ ಒಂದು ಕ್ಷಣವನ್ನು ದಾಖಲಿಸಬಹುದು. ಆದರೆ ಬದುಕಿನ ಪ್ರತಿಯೊಂದು ಕ್ಷಣ ವನ್ನೂ ದಾಖಲಿಸುವ ಸಾಕ್ಷಿ ನಮ್ಮ ಸ್ವಂತ ಮನಸ್ಸೇ.ಅಲ್ಲವೇ ? ಪ್ರಾಮಾಣಿಕತೆ ಎನ್ನುವುದು ನಮ್ಮೊಂದಿಗೆ ಇದ್ದಾಗ ಬೇರೆಯ ಅನಾಹುತಗಳು ನಡೆದರೂ ಭಯವೇಕೆ .
ಬರಹ
: ಕಾಶಿಗೌ, ಮೈಸೂರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವ, ಆತ್ಮವಿಶ್ವಾಸ ಬೆಳೆಸುವುದೇ ಕ್ರೀಡೆಯ ಉದ್ದೇಶ ಪ್ರಾಮಾಣಿಕತೆಗೆ ಸ್ಟಿಂಗ್ ಆಪರೇಶನ್ ಭಯವೇಕೆ?:ಮನಸ್ಸಿನ ಆರೋಗ್ಯಕ್ಕೆ ಅರಿವೇ ಮೊದಲ ಚಿಕಿತ್ಸೆ:ಮೈಸೂರು ದಸರಾ ಸಂಸ್ಕೃತಿ, ಪರಂಪರೆ, ವೈಭವ  ದೃಷ್ಟಿಕೋನ ಚಿಂತನೆ ಕಾರ್ಯಕ್ರಮ ಆಯೋಜನೆವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಗೆ ಸರ್ಕಾರದಿಂದ ಆಹ್ವಾನಚಿತ್ರದುರ್ಗ ಜಿಲ್ಲೆಯ ರೈತರಿಗೆ ವಿಮಾ ಮೊತ್ತ ಶೀಘ್ರ ಬಿಡುಗಡೆಗೆ ಕೃಷಿ ಆಯುಕ್ತರಿಗೆ ಮನವಿ ಸಲ್ಲಿಸಿದ ಶಿವಲಿಂಗಪ್ಪಎನ್ ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆ ಆಗುವುದು ನಿಶ್ಚಿತ-ಸಂಸದ ಕಾರಜೋಳದೇಶದ ಯುವಕರನ್ನು ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿರಾಹುಲ್ ಗಾಂಧಿ ಪ್ರಧಾನಿಯಾಗಲು ಹುಚ್ಚರಂತೆ ಓಡಾಡುತ್ತಿದ್ದಾರೆ: ಸಂಸದ ಗೋವಿಂದ್ ಕಾರಜೋಳ ವಾಗ್ದಾಳಿಅನುಭವ ಮತ್ತು ಜ್ಞಾನ ಎರಡೂ ನನ್ನಲ್ಲಿಲ್ಲ- ಸಂಸದ ಗೋವಿಂದ್ ಕಾರಜೋಳ