ಚಂದ್ರವಳ್ಳಿ ನ್ಯೂಸ್, ನವದೆಹಲಿ / ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (ಸಿಸಿಬಿ ಸೈಬರ್ ಕ್ರೈಮ್) ಪೊಲೀಸರು ಮೊದಲ ಪ್ರಮುಖ ಕಾರ್ಯಾಚರಣೆ ನಡೆಸಿದ್ದು, ದೆಹಲಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದೆಹಲಿ ಮೂಲದ ರಿತೇಶ್ ಪಾಂಡೆ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರು ಶನಿವಾರ ದೆಹಲಿಯಲ್ಲಿ ಈತನನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದ್ದಾರೆ.
ವಿಡಿಯೋ ರೆಕಾರ್ಡಿಂಗ್ಗೆ ಮೊಬೈಲ್ ಖರೀದಿ!:
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರಿಗೆ, ಆಪರೇಷನ್ ವೇಳೆ ವಿಡಿಯೋ ರೆಕಾರ್ಡ್ ಮಾಡಲು ಬಂಧಿತ ಆರೋಪಿ ರಿತೇಶ್ ಪಾಂಡೆ ಹೊಸ ಮೊಬೈಲ್ ಫೋನ್ ಖರೀದಿ ಮಾಡಿದ್ದ ಎಂಬ ವಿಷಯ ತಿಳಿದುಬಂದಿದೆ. ಸದ್ಯ ಸೈಬರ್ ಕ್ರೈಮ್ ಪೊಲೀಸರು ಆರೋಪಿಯನ್ನು ರಹಸ್ಯ ಸ್ಥಳದಲ್ಲಿರಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಶರಣಾಗತಿ?:
ಮತ್ತೊಂದೆಡೆ, ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಹೆಸರು ಕೇಳಿಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವ ಸಾಧ್ಯತೆಯಿರುವುದರಿಂದ, ನೋಟಿಸ್ ನೀಡಿದ ಬೆನ್ನಲ್ಲೇ ಕೃಪಾ ಆಳ್ವಾ ಅವರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಗಂಭೀರ ಆರೋಪ:
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ವಿರುದ್ಧ ನಡೆದ ಈ ಸ್ಟಿಂಗ್ ಆಪರೇಷನ್ ಗೂಢಚರ್ಯೆಯ ಹಿಂದೆ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಹಾಗೂ ಸುದ್ದಿ ವಾಹಿನಿಯೊಂದರಲ್ಲಿ ಗುರುತಿಸಿಕೊಂಡಿರುವ ರಾಕೇಶ್ ಶೆಟ್ಟಿ ಅವರ ಕೈವಾಡವಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಹಲವು ಪ್ರಮುಖ ವ್ಯಕ್ತಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.



