i
ಚಿಲುಮೆ ಎಫೆಕ್ಟ್, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಾಗ ತೀವ್ರ ಎಚ್ಚರ ವಹಿಸಿ- ಡಾ. ಪಿ.ಸಿ. ಜಾಫರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಎಲ್ಲ ಪ್ರಕ್ರಿಯೆಗಳನ್ನು ಜರುಗಿಸುವ ಸಂದರ್ಭದಲ್ಲಿ ಅಧಿಕಾರಿಗಳು ಅದರಲ್ಲೂ ಪ್ರಮುಖವಾಗಿ ಆಯಾ ತಾಲ್ಲೂಕುಗಳ ತಹಸಿಲ್ದಾರರು ತೀವ್ರ ಎಚ್ಚರಿಕೆ ವಹಿಸಬೇಕು, ಯುವ ಮತದಾರರನ್ನು ಸೇರ್ಪಡೆಗೊಳಿಸಲು ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆ (ವೆಚ್ಚ) ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಕುರಿತು ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಈಗಾಗಲೆ ನಾವು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಬಗ್ಗೆ ಎಲ್ಲರ ನಿಗಾ ಇರುತ್ತದೆ. ತಹಸಿಲ್ದಾರರು ಜವಾಬ್ದಾರಿಯನ್ನು ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರ ಮೇಲೆ ಹಾಕಿ ಕೂರುವಂತಿಲ್ಲ. ಸಮಸ್ಯೆ ಎದುರಾದಲ್ಲಿ, ಅದರ ಸಂಪೂರ್ಣ ಹೊಣೆಯನ್ನು ತಹಸಿಲ್ದಾರರೇ ಹೊರಬೇಕಾಗುತ್ತದೆ ಎಂಬ ಅರಿವು ಇರಲಿ. ಮತದಾರರ ಹೆಸರನ್ನು ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಾಗ, ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ, ಮಾರ್ಗಸೂಚಿಯನ್ನು ಅನುಸರಿಸಲಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬೂತ್ ಮಟ್ಟದ ಅಧಿಕಾರಿಗಳು ಡಿಲೀಟ್ ಮಾಡುವವರ ಪಟ್ಟಿ ಕೊಟ್ಟ ಕೂಡಲೆ ತೆಗೆದುಹಾಕುವಂತಿಲ್ಲ, ಪ್ರತಿಯೊಂದಕ್ಕೂ ಕೂಡ ದಾಖಲೆಗಳಿರಬೇಕು. ಮತದಾರರು ಆ ಸ್ಥಳದಲ್ಲಿ, ಕ್ಷೇತ್ರದಲ್ಲಿ ಇದ್ದಾರೆಯೇ ಇಲ್ಲವೋ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ, ಬಳಿಕ ನಿರ್ಧಾರ ಕೈಗೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಮುಂತಾದ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅವಕಾಶಗಳಿರುತ್ತವೆ. ಚುನಾವಣೆ ಘೋಷಣೆಯಾದ ಬಳಿಕ ಪರಿಶೀಲನೆ ಮಾಡಿಕೊಂಡು ಕೂರುವುದಲ್ಲ. ಬೇರೆ ಬೇರೆ ಜಿಲ್ಲೆಗಳಿಂದ ಅಭ್ಯರ್ಥಿಗಳು ಬಂದು ಚುನಾವಣೆಗೆ ಸ್ಪರ್ಧಿಸುವ ಸಂಭವವಿರುತ್ತದೆ. ಹೀಗಾಗಿ ಅಧಿಕಾರಿಗಳು, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಈ ಬಾರಿ ಅಂದಾಜು 40 ಸಾವಿರ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಗುರಿ ನಿಗದಿಪಡಿಸಲಾಗುವುದು. ಅಧಿಕಾರಿಗಳು ಜಿಲ್ಲೆಯ ಪ್ರತಿಯೊಂದು ಕಾಲೇಜು, ಪಾಲಿಟೆಕ್ನಿಕ್, ಐಟಿಐ, ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳು, ಸೇರಿದಂತೆ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು, ಅಲ್ಲಿನ ಅರ್ಹ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ವಿಕಲಚೇತನರ ಹಲವು ಸಂಘ ಸಂಸ್ಥೆಗಳಿರುತ್ತವೆ, ಇವರ ನೆರವನ್ನು ಪಡೆದು ವಿಕಲಚೇತನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಯತ್ನಿಸಬೇಕು ಎಂದು ಡಾ. ಪಿ.ಸಿ. ಜಾಫರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಯುವ ಮತದಾರರು, ವಿಕಲಚೇತನರು, ತೃತೀಯಲಿಂಗಿಗಳು, ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಾವು ವಿಶೇಷ ಕ್ರಮ ಕೈಗೊಂಡಿದ್ದೇವೆ. ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಂಡಿದ್ದಾರೆ, ಸಾರ್ವಜನಿಕರು ಆನ್ಲೈನ್ ಮೂಲಕವೂ ವೋಟರ್ ಹೆಲ್ಪ್ಲೈನ್ ಆ್ಯಪ್ (ಗಿಊಂ ಂಠಿಠಿ) ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಹೆಸರು ಸೇರ್ಪಡೆ, ತಿದ್ದುಪಡಿ ಮುಂತಾದ ಪರಿಷ್ಕರಣೆ ಕಾರ್ಯ ಕೈಗೊಳ್ಳುವ ಬಗ್ಗೆ ಹಾಗೂ ಯಾವುದೇ ಗೊಂದಲ ಅಥವಾ ಸಂದೇಹಗಳ ನಿವಾರಣೆಗಾಗಿ 08194-222176 ಸಹಾಯವಾಣಿ ಸ್ಥಾಪಿಸಿರುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈಗಾಗಲೆ ಜಿಲ್ಲೆಯಲ್ಲಿ ನಾವು ಎಲ್ಲ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಿ, ಅವರಿಗೆ ಆಯಾ ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳಿಂದ ನಮೂನೆ 06 ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಸಲ್ಲಿಸುವಂತೆ ಸೂಚನೆ ನೀಡಿದ್ದು, ಅದರಂತೆ ಸುಮಾರು 15 ಸಾವಿರ ವಿದ್ಯಾರ್ಥಿಗಳಿಂದ ದಾಖಲೆ ಪಡೆದು, ಸೇರ್ಪಡೆಗೆ ಕ್ರಮ ವಹಿಸಲಾಗಿದೆ, ಎಪಿಕ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಕಾರ್ಯ ಸುಮಾರು ಶೇ. 81 ರಷ್ಟು ಆಗಿದೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ತಾಲ್ಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ ಅವರು, ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸ್ವೀಕೃತಗೊಳ್ಳುವ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸುವಂತಿಲ್ಲ. ಒಂದು ವೇಳೆ ತಿರಸ್ಕøತಗೊಳಿಸಬೇಕಿದ್ದಲ್ಲಿ, ಸೂಕ್ತ ಕಾರಣ ನಮೂದಿಸಿಯೇ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ತಹಸಿಲ್ದಾರರು ಹಾಗೂ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿ.ಪಂ. ಸಿಇಒ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ಚಂದ್ರಯ್ಯ, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಸೇರಿದಂತೆ ತಾಲ್ಲೂಕುಗಳ ತಹಸಿಲ್ದಾರರು, ನೋಡಲ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.