i
ಭೀಕರ ರಸ್ತೆ ಅಪಘಾತ, ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ: ಭೀಕರ ರಸ್ತೆ ಅಪಘಾತ, ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ ಹೊಂದಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಕಲ್ಲಾಪುರ ಬಳಿ ಭಾನುವಾರ ಬೆಳಿಗ್ಗೆ ಕಾರು-ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು ಒಬ್ಬರು ಗಂಭೀರ ವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಕಲ್ಲಾಪುರ ಬಳಿ ಗೂಡ್ಸ್ ಲಾರಿ ಹಾಗೂ ಕಾರು ಮಧ್ಯೆ ಡಿಕ್ಕಿ ಸಂಭವಿಸಿದೆ. ಮೃತರನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಾರ್ತಿಕ್ (21), ವಿವೇಕ್ (21) ಹಾಗೂ ಮೋಹನ (21) ಎಂದು ಗುರುತಿಸಲಾಗಿದೆ. ಮತ್ತೊಬ್ಬ ರುದ್ರೇಶ್ ಪಾಟೀಲ ಎಂಬುವವರ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ದಾವಣಗೆರೆಯವರು. ಅಲ್ಲಿನ ಬಿಐಇಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ಶಿವಮೊಗ್ಗಕ್ಕೆ ಬಂದವರು ವಾಪಸ್ ದಾವಣಗೆರೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮಾಂತರ ಠಾಣೆ ಅಧಿಕಾರಿಗಳಾದ ಅಭಯ್ ಪ್ರಕಾಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.