
ಒಳಗಿನ ಅನುಭವವನ್ನು ಸಾಹಿತ್ಯ ಲೋಕಕ್ಕೆ ಹಂಚಿದ ದೊಡ್ಡ ದಿಗ್ಗಜ ವೇಣು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಳಗಿನ ಅನುಭವವನ್ನು ಸಾಹಿತ್ಯ ಲೋಕಕ್ಕೆ ಹಂಚಿದ ಬಹುದೊಡ್ಡ ದಿಗ್ಗಜ ಡಾ.ಬಿ.ಎಲ್.ವೇಣು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ತಿಳಿಸಿದರು. ಅಭಿರುಚಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಬಯಲುಸೀಮೆ ಕಲಾ ಬಳಗ ಚಿತ್ರದುರ್ಗದಿಂದ ತ.ರಾ.ಸು ರಂಗಮಂದಿರಲ್ಲಿ ಭಾನುವಾರ ನಡೆದ ಡಾ.ಬಿ.ಎಲ್.ವೇಣುರವರ ಸಾಹಿತ್ಯ ಕುರಿತು ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಬಿ.ಎಲ್.ವೇಣು ಬಹುಮುಖ ವ್ಯಕ್ತಿತ್ವವುಳ್ಳವರು. ಪ್ರತಿಯೊಂದರಲ್ಲೂ ಹುಡುಕಾಟ ಹೆಚ್ಚಿಸುತ್ತಾ ಕನ್ನಡ ಸಾರಸ್ವತ ಲೋಕಕ್ಕೆ ಹೆಚ್ಚು ಕಾದಂಬರಿಗಳನ್ನು ಕೊಟ್ಟಿದ್ದಾರೆ. ಹದಿನಾರು ಕಾದಂಬರಿಗಳು ಸಿನಿಮಾಗಳಾಗಿ ಹೆಚ್ಚು ಜನಪ್ರಿಯತೆ ಪಡೆದಿವೆ. ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಬಿ.ಎಲ್.ವೇಣು ಕೇವಲ ಚಿತ್ರದುರ್ಗ ಆಸ್ತಿಯಲ್ಲ. ಇಡೀ ರಾಷ್ಟ್ರದ ಆಸ್ತಿ ಎಂದು ಬಣ್ಣಿಸಿದರು.
ಅದ್ಬುತವಾದ ಸಾಹಿತ್ಯಿಕ ಲೋಕ ಕಟ್ಟುತ್ತೇನೆಂದು ತಮ್ಮ ಬರವಣಿಗೆ ಮೂಲಕ ರೂಪಿಸಿರುವ ಡಾ.ಬಿ.ಎಲ್.ವೇಣು ಮಾನವತಾವಾದದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ನನ್ನ ಪ್ರತಿಯೊಂದು ಹುಡುಕಾಟದ ಹೆಜ್ಜೆಯಲ್ಲಿ ಕೈಹಿಡಿದು ನಡೆಸಿದ್ದಾರೆಂದು ಸ್ಮರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಬಿ.ಕೆ.ರವಿ ಡಾ.ಬಿ.ಎಲ್.ವೇಣು ಸಂಗೀತದಿಂದ ಕಥೆಗಾರ, ಕಾದಂಬರಿಕಾರ, ಸಾಹಿತಿಯಾಗಿರುವುದು ಸುಲಭದ ಕೆಲಸವಲ್ಲ. ಸರಸ್ವತಿ ಅವರಿಗೆ ನಿರೂಪಣೆಯ ಚಾತುರ್ಯ ನೀಡಿದೆ. ಪುಟ್ಟಣ್ಕಣಗಾಲ್, ಟಿ.ಎಸ್.ನಾಗಭರಣ, ಸಿದ್ದಲಿಂಗಯ್ಯನವರಂತ ದೊಡ್ಡ ದೊಡ್ಡ ನಿರ್ದೇಶಕರುಗಳ ಜೊತೆ ಕೆಲಸ ಮಾಡಿದ್ದಾರೆ. ಸಾಹಿತ್ಯ ಸಂಗೀತ ಚಲನಚಿತ್ರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಅದನ್ನು ಯಾರು ಮರೆಯಲು ಸಾಧ್ಯವಿಲ್ಲ. ಅವರಿಂದ ಇನ್ನು ಹೆಚ್ಚು ಹೆಚ್ಚು ಸಾಹಿತ್ಯ ಹೊರಹೊಮ್ಮಲಿ ಎಂದು ಆಶಿಸಿದರು.
ಕನ್ನಡ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅಭಿನಂದನಾ ನುಡಿಗಳನ್ನಾಡಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ವೇದಿಕೆಯಲ್ಲಿದ್ದರು.