
ಮಹಿಳೆಯರ ಸಾಧನೆಗೆ ಕಾಲೆಳೆಯದೆ ಪುರುಷ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಹಿಳೆಯರಿಗೆ ಉದ್ಯೋಗ ಸ್ಥಳಗಳಲ್ಲಿ ಆತ್ಮ ಗೌರವದಿಂದ ಕರ್ತವ್ಯ ನಿರ್ವಹಿಸಲು ಸಮಾಜ ಅನುವು ಮಾಡಿಕೊಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಹಾಗೂ ಖ್ಯಾತ ಕವಯತ್ರಿ ಡಾ.ತಾರಿಣಿ ಶುಭದಾಯಿನಿ ಹೇಳಿದರು.
ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ, ಸಮಾಜ ಮಹಿಳೆಯರ ಸಾಧನೆಗೆ ಕಾಲೆಳೆಯದೆ ಸ್ತ್ರೀಯರಿಗೆ ಬೆನ್ನೆಲುಬಾಗಿ ನಿಂತುಕೊಂಡು ಅವರ ಸಾಧನೆಗೆ ಸಾಥ್ ನೀಡಬೇಕು. ಮಹಿಳೆಯರು ಮಹಿಳೆಯರಿಗೆ ಜೊತೆಯಾಗಿ ನಿಂತು ಬಲ ನೀಡಬೇಕು. ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗ ತಾರತಮ್ಯಕ್ಕೆ ಆಸ್ಪದ ನೀಡದೇ ಎಲ್ಲಾ ಮಹಿಳೆಯರು ಬೆಳೆಯಬೇಕು. ಮಹಿಳೆಯರು ಮುಂದುವರೆಯುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು. ತಂತ್ರಜ್ಞಾನದ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ನಾವುಗಳು ಕಂಪ್ಯೂಟರ್ ಸಾಕ್ಷರರಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸ್ತ್ರೀಯರನ್ನು ಹಿಯ್ಯಾಳಿಸುವ, ಗೇಲಿ ಮಾಡುವ ಕೃತ್ಯಗಳನ್ನು ಧಮನ ಮಾಡಬೇಕು. ಹಿಂದೆ ಐಎಎಸ್, ಐಪಿಎಸ್ ಉದ್ಯೋಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇತ್ತು. ಆದರೆ ಇಂದಿನ ದಿನಗಳಲ್ಲಿ ಮಹಿಳಾ ಐಎಎಸ್, ಐಪಿಎಸ್ ಅಧಿಕಾರಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಭರತ್ ಪಿ.ಬಿ. ಮಾತನಾಡಿ, ನಾವುಗಳು ಸ್ತ್ರೀ ಸಬಲೀಕರಣದ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಮಹಿಳೆಯರು ಸಮಾಜದ ನಿಂದನೆಗಳಿಗೆ ಕಿವಿಗೊಡದೆ ತಮ್ಮನ್ನು ತಾವು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಮುಂದೆ ಸಾಗಬೇಕು. ಸ್ತ್ರೀ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಗೆಳತಿಯಾಗಿ, ಜೀವನ ಸಂಗಾತಿಯಾಗಿ ಹೀಗೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಜೀವನ ಸಾಗಿಸುತ್ತಾಳೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮನೆಯ ಜವಾಬ್ದಾರಿಗಳ ಜೊತೆ ಕೌಶಲ್ಯಾಭಿವೃದ್ಧಿಗಳನ್ನು ಕಲಿತು ಮನೆಯಿಂದಲೇ ಕೆಲಸ ಮಾಡಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಲಿಂಗ ಭೇದ ಮಾಡದೇ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿದಲ್ಲಿ ಸಮಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಪೋರಾಳ್ ನಾಗರಾಜ್, ಡಾ.ಲೋಕೇಶ್ ಹೆಚ್.ಜೆ, ಪ್ರೊ.ಶೃತಿ ಎಂ ಕೆ, ಪ್ರೊ. ಸುಷ್ಮಿತಾದೇಭ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅನನ್ಯ ಪ್ರಾರ್ಥಿಸಿ, ಸಹನ ಡಿ.ಟಿ. ಸ್ವಾಗತಿಸಿ, ದೀಪ್ತಿ ನಿರೂಪಿಸಿ ತನುಶ್ರೀ ವಂದಿಸಿದರು.