i
ಟೆಸ್ಟ್ ಡ್ರೈವ್ ಸಂದರ್ಭದಲ್ಲೇ ಧಗಧಗನೆ ಹೊತ್ತಿ ಉರಿದ ಎಸ್ಯುವಿ ಕಾರ್…
ಚಂದ್ರವಳ್ಳಿ ನ್ಯೂಸ್, ಇಂದೋರ್:
ಎಸ್ಯುವಿ ಕಾರ್ ಅನ್ನು ಟೆಸ್ಟ್ ಡ್ರೈವ್ ಮಾಡುವ ಸಂದರ್ಭದಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ಮಧ್ಯಪ್ರದೇಶ ರಾಜ್ಯದ ಇಂದೋರ್ನ ಶೆರಾಟನ್ ಗ್ಯಾಂಡ್ ಹೋಟೆಲ್ ಬಳಿ ನಡೆದಿದೆ.
ಎಸ್ಯುವಿ ಕಾರ್ಗೆ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದಿದ್ದು ಅದೃಷ್ಟವಶಾತ್ ಕಾರೊಳಗಿದ್ದ ಇರ್ಷಾದ್ ಮತ್ತು ಹಲೀಮ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ಯಾರೇಜ್ ನಡೆಸುತ್ತಿರುವ ಇರ್ಷಾದ್ ಖಾನ್ ಮತ್ತು ಅವರ ಸಹೋದ್ಯೋಗಿ ಹಲೀಂ ಖಾನ್ ಅವರು ಮಹೀಂದ್ರ ಸ್ಕಾರ್ಪಿಯೊವನ್ನು ಟೆಸ್ಟ್ ಡ್ರೈವ್ ಮಾಡಲು ಹೊರಟಿದ್ದರು. ಡ್ಯಾಶ್ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡಾಗ ಟೆಸ್ಟ್ ಡ್ರೈವ್ ಮಾಡುತ್ತಿದ್ದ ಕಾರಿನಿಂದ ಹೊಗೆ ಬರಲಾರಂಭಿಸಿತು. ಸ್ವಲ್ಪ ಹೊತ್ತಿನಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು ಇಡೀ ಪ್ರದೇಶ ಕಪ್ಪು ಹೊಗೆಯಿಂದ ಆವರಿಸಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿತ್ತು. ಇದೇ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಮುಂಭಾಗದ ಬಾಗಿಲು ಸ್ವಯಂಚಾಲಿತವಾಗಿ ಲಾಕ್ ಆಗಿದೆ. ಇರ್ಷಾದ್ ಕಾರಿನ ಹಿಂಬದಿಯಿಂದ ಜಿಗಿದಿದ್ದಾನೆ. ಆದರೆ ಹೊತ್ತಿಕೊಳ್ಳುತ್ತಿದ್ದಂತೆ ಹಲೀಂ ಸಿಕ್ಕಿಬಿದ್ದಿದ್ದಾನೆ. ಆದರೆ ಆತ ಸಮಯಪ್ರಜ್ಞೆ ತೋರಿಸಿ ಹಿಂದಿನ ಸೀಟಿಗೆ ಹೋಗಿ ಅಲ್ಲಿಂದ ತೆಗೆದು ಹೊರಗೆ ಬಂದಿದ್ದಾನೆ. ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ಈ ಘಟನೆಯಿಂದಾಗಿ ಎಸ್ ಯುವಿ ಕಾರ್ ಖರೀದಿ ಮಾಡುವವರು ಒಮ್ಮೆ ಯೋಚಿಸುವಂತೆ ಮಾಡಿದೆ.