i
ಹೊಳಲ್ಕೆರೆಯಲ್ಲಿ ಮತದಾರರ ಮನಸೂರೆಗೊಂಡ ಮಾದರಿ ಮತಕೇಂದ್ರಗಳು…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಚುನಾವಣಾ ಆಯೋಗದ ನಿರ್ದೇಶನದಂತೆ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು, ಚಿತ್ರದುರ್ಗ, ಚುನಾವಣಾಧಿಕಾರಿಗಳು, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ, ತಹಶೀಲ್ದಾರ್ ಹೊಳಲ್ಕೆರೆ ಇವರ ಸೂಚನೆಯಂತೆ ಹೊಳಲ್ಕೆರೆ ಪುರಸಭೆ ವತಿಯಿಂದ ಪಟ್ಟಣದ ನಾಲ್ಕು ಮತಗಟ್ಟೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯ ಮತಗಟ್ಟೆ ಸಂ: 175 ನ್ನು ವಿಶೇಷವಾಗಿ ಮಹಿಳೆಯರಿಗೆಂದೇ ವಿನ್ಯಾಸಗೊಳಿಸಿ, “ಸಖಿ ಮತದಾನ ಕೇಂದ್ರ” (ಪಿಂಕ್ ಬೂತ್) ಎಂದು ನಾಮಕರಣ ಮಾಡಲಾಗಿತ್ತು. ಗುಲಾಬಿ ಬಣ್ಣದ ಸ್ವಾಗತ ಕಮಾನು, ಬಲೂನು, ಶಾಮಿಯಾನ, ಹೂಗಳಿಂದ ಅಲಂಕೃತಗೊಂಡಿದ್ದ ಈ ಮತಕೇಂದ್ರದಲ್ಲಿ ಗುಲಾಬಿ ಬಣ್ಣದ ಸೀರೆ ಧರಿಸಿದ ಮಹಿಳಾ ಸಿಬ್ಬಂದಿಗಳು ಮಹಿಳಾ ಮತದಾರರನ್ನು ಆತ್ಮೀಯವಾಗಿ ಮತಕೇಂದ್ರಕ್ಕೆ ಬರಮಾಡಿಕೊಂಡು ಮತದಾನ ಮಾಡಿಸಿದರು. ಜೊತೆಗೆ ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರಿಗೂ ಸಹ ಗಾಲಿ ಕುರ್ಚಿಗಳನ್ನು ನೀಡಿ ಮತ ಚಲಾಯಿಸಲು ನೆರವು ನೀಡಲಾಯಿತು. ಟಿ.ಪಿ.ಸಿ.ಕೆ.ಬಾಲಕಿಯರ ಪ್ರೌಢಶಾಲೆ, ಮತಗಟ್ಟೆ ಸಂ: 173ನ್ನು ವಿಶೇಷ ಚೇತನರ ಮತದಾನ ಕೇಂದ್ರವೆಂದು ವಿಶೇಷವಾಗಿ ವಿನ್ಯಾಸಗೊಳಿಸಿ, ಗಾಲಿ ಕುರ್ಚಿ ಹಾಗೂ ಭೂತಗನ್ನಡಿ ಸೌಲಭ್ಯವನ್ನು ನೀಡುವುದರ ಜೊತೆಗೆ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸಲು ನೆರವಾಗಲು ಅಗತ್ಯ ಸಿಬ್ಬಂದಿಗಳನ್ನು ಸಹ ಪುರಸಭೆ ವತಿಯಿಂದ ಒದಗಿಸಲಾಗಿತ್ತು. ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ: 177ನ್ನು ಧ್ಯೇಯ ಆಧಾರಿತ ಮತದಾನ ಕೇಂದ್ರವೆಂದು ಆಯ್ಕೆ ಮಾಡಿ ಚಿತ್ರದುರ್ಗದ ಐತಿಹಾಸಿಕ ಕಲ್ಲಿನಕೋಟೆಯ ಪ್ರತಿಕೃತಿಯ ಚಿತ್ರಬಿಡಿಸಿ, ಮತಕೇಂದ್ರದ ಒಳಗೆ ಆಗಮಿಸುವ ಮತದಾರನಿಗೆ ಚಿತ್ರದುರ್ಗದ ಕೋಟೆಯ ಒಳಗೆ ಹೋದ ಅನುಭವ ಉಂಟಾಗುವಂತೆ ಮಾಡಲಾಗಿತ್ತು. ಅದೇ ರೀತಿ ಮಂಜುನಾಥ ಪ್ರೌಢಶಾಲೆಯ ಮತಗಟ್ಟೆ ಸಂ: 180ನ್ನು ಗಿರಿಜನ ಮತದಾನ ಕೇಂದ್ರವೆಂದು ನಾಮಕರಣ ಮಾಡಿ ಬುಡಕಟ್ಟು ಜನಾಂಗೀಯರ ಉಡುಗೆ ತೊಡುಗೆ ಹಾಗೂ ಜೀವನ ಶೈಲಿಯನ್ನು ಬಿಂಬಿಸುವ ವರ್ಲಿ ಚಿತ್ರಗಳ ಮೂಲಕ ಮತಗಟ್ಟೆಯ ವಿಭಿನ್ನ ಮೆರುಗು ನೀಡಲಾಗಿತ್ತು.
ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೊಳಲ್ಕೆರೆ ಪಟ್ಟಣದ ಮತಕೇಂದ್ರಗಳಲ್ಲಿ ಮತದಾರರನ್ನು ವಿಶೇಷ ವ್ಯವಸ್ಥೆ ಹಾಗೂ ಮನಮೋಹಕ ವಿನ್ಯಾಸದಿಂದ ಮತದಾರ ಪ್ರಭು ಸಂತಸದಿಂದ ಹಾಗೂ ಆರಾಮದಾಯಕವಾಗಿ ಮತಚಲಾಯಿಸಲು ಉತ್ತಮ ವ್ಯವಸ್ಥೆಯನ್ನು ಹೊಳಲ್ಕೆರೆ ಪುರಸಭೆ ವತಿಯಿಂದ ಮಾಡಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಮಾತನಾಡಿ ನಮ್ಮ ಈ ವಿಶೇಷ ಪ್ರಯತ್ನಕ್ಕೆ ಮತದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಮತದಾರರು ಮತಕೇಂದ್ರಗಳ ವರ್ಣರಂಜಿತ ವಿನ್ಯಾಸ, ನೆರಳಿನ ವ್ಯವಸ್ಥೆ, ಸಿಬ್ಬಂದಿಗಳ ಸೌಜನ್ಯಯುತ ನೆರವು, ವರ್ಲಿ ಚಿತ್ರಗಳ ಗೋಡೆಬರಹ ಇವುಗಳ ಬಗ್ಗೆ ವ್ಯಾಪಕ ಮೆಚ್ಚುಗೆ ನೀಡಿದ್ದು ನಮ್ಮ ಈ ಪ್ರಯತ್ನ ಫಲಕಾರಿಯಾಗಿರುವುದು ಖುಷಿ ತಂದಿದೆ ಎಂದರು.
ಹೊಳಲ್ಕೆರೆ ತಾಲ್ಲೂಕು ತಹಶೀಲ್ದಾರ್ ನಾಗರಾಜ್ ಪಟ್ಟಣದ ಮತಕೇಂದ್ರಗಳಿಗೆ ಭೇಟಿ ನೀಡಿ ಪುರಸಭೆಯಿಂದ ಕೈಗೊಂಡಿರುವ ಈ ಉತ್ತಮ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.