i
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಇಂದಿನಿಂದ ಆರಂಭ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನೂ ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು, ಅಧಿಕಾರಿಗಳ 2022-23ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಹೊರಡಿಸಿದೆ.
ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಜೂನ್.6ರಿಂದ ಆರಂಭಗೊಳ್ಳಲಿದೆ.
ಶಿಕ್ಷಕರ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆಯ ಆಯುಕ್ತ ಬಿ.ಬಿ ಕಾವೇರಿ ಪ್ರಕಟಿಸಿದ್ದಾರೆ.
ಹೆಚ್ಚುವರಿ ಶಿಕ್ಷಕರ ಪರಿಷ್ಕೃತ ಕರಡು ಪಟ್ಟಿಯನ್ನು ದಿನಾಂಕ 06-06-2023ರಂದು ಪ್ರಕಟಿಸಲಾಗುತ್ತದೆ. ವರ್ಗಾವಣಾ ತಂತ್ರಾಂಶದ ಮುಖಾಂತರ ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಆನ್ ಲೈನ್ ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 06-06-2023 ರಿಂದ 10-06-2023ರವರೆಗೆ ಅವಕಾಶ ನೀಡಲಾಗುತ್ತದೆ. ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆಯಲ್ಲಿನ ದಾಖಲೆಗಳ ಪರಿಶೀಲನೆ, ಅಂಗೀಕಾರ, ತಿರಸ್ಕಾರವನ್ನು ದಿನಾಂಕ-13-06-2023ರವರೆಗೆ ನಡೆಸಲಾಗುತ್ತದೆ. ಅಂತಿಮ ತಾತ್ಕಾಲಿಕ ಆದ್ಯತಾ ಪಟ್ಟಿ 14-06-2023ರಂದು ಪ್ರಕಟಿಸಲಾಗುತ್ತದೆ. ಆದೇಶದಿಂದ ಭಾದಿತರಾದ ಶಿಕ್ಷಕರು ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ಸಂಪರ್ಕಿಸಲು ದಿನಾಂಕ 15-06-2023ರಂದು ಅವಧಿ ನಿಗದಿ ಪಡಿಸಲಾಗಿದೆ. ಅಂದು ವಿಭಾಗೀಯ ಸಹ ನಿರ್ದೇಶಕರನ್ನು ಸಹ ಭೇಟಿಯಾಗಬಹುದು ಎಂದು ಆದೇಶಿಸಲಾಗಿದೆ.
ಅಂತಿಮ ಆದ್ಯತಾ ಪಟ್ಟಿಗೆ ಸಲ್ಲಿಕೆಯಾಗುವ ಆಕ್ಷೇಪಣೆಗಳ ಪರಿಶೀಲನೆ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಿಸುವ ಪುರಸ್ಕೃತ, ತಿರಸ್ಕೃತ ಪಟ್ಟಿಯಿಂದ ಭಾದಿತರಾಗುವ ಶಿಕ್ಷರು ಸಲ್ಲಿಸುವ ಮನವಿಯ ಇತ್ಯರ್ಥ ಹಾಗೂ ಇಂಡೀಕರಣವನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಆಯಾ ಕಚೇರಿ ಮುಖ್ಯಸ್ಥರು ದಿನಾಂಕ 16-06-2023ರಂದು ಆಲಿಕೆ ಮಾಡಲಿದ್ದಾರೆ. ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹಂಚಿಕೆ ಕೌನ್ಸಿಲಿಂಗ್ ಗೆ ಅರ್ಹರಿರುವ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿಯನ್ನು ಎಲ್ಲಾ ವೃಂದವಾರು, ಶಾಲಾವಾರು, ವಿಷಯವಾರು, ತಾಲೂಕುವಾರು, ಜಿಲ್ಲಾವಾರು ದಿನಾಂಕ 17-06-2023ರಂದು ಪ್ರಕಟಿಸಲಾಗುತ್ತದೆ. ಕೌನ್ಸಿಲಿಂಗ್ ಗೆ ಲಭ್ಯವಿರುವ ವೃಂದವಾರು, ವಿಷಯವಾರು ಖಾಲಿ ಹುದ್ದೆಗಳನ್ನು ದಿನಾಂಕ 17-06-2023ರಂದು ಪ್ರಕಟಣೆ ನೀಡಲಾಗುತ್ತದೆ ಎಂದಿದ್ದಾರೆ.
ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಕೌನ್ಸಿಲಿಂಗ್ ಬ್ಲಾಕ್ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರವರೆದ ದಿನಾಂಕ 20-06-2023ರಂದು ಪೂರ್ವಾಹ್ನ ಕೌನ್ಸಿಲಿಂಗ್ ನಡೆಸಲಾಗುತ್ತದೆ. ಬ್ಲಾಕ್ ಹಂತದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹೊಂದಾಣಿಕೆಯ ನಂತರ ತಾಲೂಕಿನಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದೆ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಜಿಲ್ಲಾ ಹಂತದಲ್ಲಿ 21-06-2023ರಂದು ಪೂರ್ವಾಹ್ನ ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಲಾಗಿದೆ.