i
ಜೆಡಿಎಸ್ ಬೆಂಬಲ NDA ಗೋ ಅಥವಾ INDIA ಗೋ, ದೇವೇಗೌಡರು ಏನು ಹೇಳಿದರು ನೋಡಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ 5 ಗ್ಯಾರಂಟಿಗಳಿಗೆ ಸೋಲು ಕಂಡು ಅಸ್ತಿತ್ವಕ್ಕಾಗಿ ಪರದಾಡುತ್ತಿವೆ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ ಎನ್ನುವ ಹಲವು ಊಹಾಪೋಹಗಳಿಗೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ತೆರೆ ಎಳೆದಿದ್ದು ಯಾರೊಂದಿಗೂ ಬಿಲ್ ಕುಲ್ ಮೈತ್ರಿ ಮಾಡಿಕೊಳ್ಳುವುದಿಲ್ಲ, ಸ್ವಾತಂತ್ರವಾಗಿಯೇ ಸ್ಪರ್ಧೆ ಮಾಡುತ್ತೇವೆ ಎನ್ನುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಳ್ಳು ನೀರು ಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿಯವರೆಗೆ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ನಮ್ಮದು ಪ್ರಾದೇಶಿಕ ಪಕ್ಷ. ವಿಧಾನಸಭೆಯ ಸದಸ್ಯರು ಎಲ್ಲಾ ಸೇರಿ ಇಂದು ಸಭೆ ಮಾಡಿದ್ದಾರೆ. ಪ್ರಾದೇಶಿಕ ಪಕ್ಷ ಉಳಿಸುವ ನಿಟ್ಟಿನಲ್ಲಿ ಚರ್ಚೆ ಆಗಿದೆ. ನಾನು ಎಲ್ಲ ಶಾಸಕರನ್ನು ಭೇಟಿ ಮಾಡಿ ಮುಂದೆ ಯಾವ ಮಾರ್ಗದಲ್ಲಿ ಹೋಗಬೇಕು ಅನ್ನುವ ಸಲಹೆ ನೀಡಿದ್ದೇನೆ. ಒಂದು ಕಡೆ ಎನ್ ಡಿಎ, ಮತ್ತೊಂದು ಕಡೆ ಇಂಡಿಯಾ, ಹೀಗಾಗಿ ನನಗಿರುವ ಅನುಭವವನ್ನು ಅವರ ಬಳಿ ಹಂಚಿಕೊಂಡಿದ್ದೇನೆ ಎಂದು ಗೌಡರು ತಿಳಿಸಿದ್ದಾರೆ.
ಕುಮಾರಸ್ವಾಮಿ ಜೆಡಿಎಸ್ ಪಕ್ಷದ ನಾಯಕರು. ಅವರು ಹೊಣೆ ಹೊತ್ತು ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಜೊತೆಗಿದ್ದು ಸಲಹೆ ನೀಡಲು ಸಿದ್ದನಿದ್ದೇನೆ. ಯಾವ ಮೈತ್ರಿ ಕೂಟದ ಜೊತೆ ಸೇರುವ ಪ್ರಶ್ನೆಯೇ ಇಲ್ಲ, ಕುಮಾರಸ್ವಾಮಿ ಯವರು ಮೊನ್ನೆ ವಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ವಿರೋಧಿಸಿ ಟ್ವೀಟ್ ಮಾಡಿದ್ದರು. ಅದನ್ನು ಹಿಡಿದುಕೊಂಡು ಬಿಜೆಪಿ ನಾಯಕರು ಸದನದಲ್ಲಿ ಹೋರಾಟ ಮಾಡಿದರು. ಸದನದಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿದೆ, ಅದನ್ನು ಕಡೆಗಣಿಸಲು ಸಾಧ್ಯವಿಲ್ಲ, ಬಿಜೆಪಿಯವರು ಕಲಾಪ ಬಹಿಷ್ಕರಿಸಿ ವಾಕ್ ಔಟ್ ಮಾಡಿದರು. ಆಗ ಕುಮಾರಸ್ವಾಮಿಯವರೂ ಅವರನ್ನು ಅನುಸರಿಸಿದರು.
ಅದಕ್ಕೆ ಜೆಡಿಎಸ್-ಬಿಜೆಪಿ ಒಟ್ಟಾಗಿದೆ ಎಂದು ಕಥೆ ಹೆಣೆದು ಇಲ್ಲದ ಸಂಬಂಧ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ವಿಧಾನ ಮಂಡಲ ಕಲಾಪ ಮುಗಿಯುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ 19 ವಿಧಾನಸಭೆ ಸದಸ್ಯರು ಮತ್ತು 7 ಮಂದಿ ವಿಧಾನ ಪರಿಷತ್ ಸದಸ್ಯರು ಎಲ್ಲರೂ ಒಗ್ಗಟ್ಟಾಗಿ ತೀರ್ಮಾನ ತೆಗೆದುಕೊಂಡಿದ್ದು ಪ್ರಾದೇಶಿಕ ಪಕ್ಷವನ್ನು ಹೇಗೆ ಉಳಿಸಬೇಕೆಂದು ಸುದೀರ್ಘವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ಎಲ್ಲ ಶಾಸಕರಿಗೂ ಜೆಡಿಎಸ್ ಪಕ್ಷ ಉಳಿಸಿ ಸಂಘಟಿಸುವ ಇರಾದೆ ಹೊಂದಿದ್ದಾರೆ. ನಾನು ಇವತ್ತು ಎಲ್ಲ ಶಾಸಕರು ಮತ್ತು ವಿಪ ಸದಸ್ಯರನ್ನು ಭೇಟಿಯಾಗಿ ಮುಂದೆ ಯಾವ ಮಾರ್ಗದಲ್ಲಿ ಮುಂದೆ ಹೋಗಬೇಕು ಎಂಬುದನ್ನು ಹಂಚಿಕೊಂಡಿದ್ದೇನೆ ಸದ್ಯಕ್ಕೆ ತಟಸ್ಥ ನಿಲುವು ಹೊಂದಿರುವುದಾಗಿ ಅವರು ತಿಳಿಸಿದರು.
ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನಾವು ಕುಡಿಯೋದೇ ಬೇಡ ಅಂತೀವಿ, ನೀವು ಸ್ಪಲ್ಪ ಕುಡೀರಿ ಪರ್ವಾಗಿಲ್ಲ ಅನ್ನುತ್ತಿದ್ದೀರಿ, ಈ ಪಕ್ಷ ಉಳಿಸುವುದು ರಾಜ್ಯದ ಜನರ ಹಿತದೃಷ್ಟಿಯಿಂದ ಅಗತ್ಯ, ನಮ್ಮ ಪಕ್ಷಕ್ಕಾಗಿರೋ ಅನ್ಯಾಯ ಅದೆಲ್ಲವನ್ನು ಜನರೆ ಮುಂದೆ ಇಟ್ಟು, ಕರ್ನಾಟಕದಲ್ಲಿ ಸಾಮರ್ಥ್ಯ ಇದೆ ಅನ್ನೋದನ್ನು ಸಾಬೀತು ಮಾಡುತ್ತೇವೆ, ರಾಜಕೀಯ ಲಾಭ ಮತ್ತು ತೋರಿಕೆಗಾಗಿ ಹೇಳುತ್ತಿಲ್ಲ. ಜೀವನದ್ದುಕ್ಕೂ ಹೋರಾಟ ಮಾಡುತ್ತೇವೆ, ಹಿಂದೆಯು ಹೋರಾಟ ಮಾಡಿಕೊಂಡು ಬಂದಿದ್ದೇವೆ, ಮುಂದೆಯು ಪಕ್ಷದ ಉಳುವಿಗಾಗಿ ಹೋರಾಟ ಮಾಡುತ್ತೇವೆ ಎಂದು ದೇವೇಗೌಡರು ತಿಳಿಸಿದರು.