i
ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 27 ರಂದು ಚಾಲನೆ-ಡಿ.ಕೆ.ಶಿವಕುಮಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕುರಿತು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿ ನೀಡಿದೆ. ಈವರೆಗೆ 1.5 ಕೋಟಿ ಆಕಾಂಕ್ಷಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರೆದಿದೆ. ಈ ಯೋಜನೆಗೆ ಚಾಲನೆ ನೀಡುವ ಸಂಬಂಧ ಸಚಿವರು, ಜಿಲ್ಲಾಧಿಕಾರಿಗಳು, ಆಡಳಿತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದ್ದು, ಸಲಹೆ ಸೂಚನೆ ಮೇರೆಗೆ ಆಗಸ್ಟ್ 20ನೇ ತಾರೀಖು ನಿಗದಿಯಾಗಿದ್ದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮವನ್ನು ಆಗಸ್ಟ್ 27 ರಂದು ಬೆಳಗಾವಿಯಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.ಶೀಘ್ರದಲ್ಲೇ ಆರಂಭವಾಗಲಿರುವ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಏಕಕಾಲದಲ್ಲಿ ರಾಜ್ಯಾದ್ಯಂತ ಚಾಲನೆ ನೀಡಲು ಉದ್ದೇಶಿಸಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳು, ಆಡಳಿತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೊದಲಾದವರು ಉಪಸ್ಥಿತರಿದ್ದರು.