i
ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ಸಂಸತ್ ಸದಸ್ಯತ್ವ ಅನರ್ಹ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.
ಈ ಮಹತ್ವದ ತೀರ್ಪಿನಿಂದಾಗಿ ಪ್ರಜ್ವಲ್ ರೇವಣ್ಣ ಅವರು ಇನ್ನು 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
2019ರ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಎ.ಮಂಜು ಮತ್ತು ದೇವರಾಜೇಗೌಡ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಅವರ ಸಂಸತ್ ಸದಸ್ಯತ್ವ ಅಸಿಂಧುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಎ.ಮಂಜು ಮನವಿ ಮಾಡಿದ್ದರು. ಆದರೆ, ಮನವಿಯನ್ನು ನ್ಯಾ.ಕೆ.ನಟರಾಜನ್ ಅವರಿದ್ದ ಪೀಠದಿಂದ ವಜಾಗೊಳಿಸಿದೆ. ಇನ್ನು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಪರ ವಕೀಲರು ಮುಂದಾಗಿದ್ದಾರೆ. ಏನು ದೂರು- ವಕೀಲ ಹಾಗೂ ಕೆಡಿಪಿ ಮಾಜಿ ಸದಸ್ಯ ಜಿ.ದೇವರಾಜೇಗೌಡ ಅವರು, ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರವನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಏ.26, 2019ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಲವಾರು ಸುಳ್ಳು ಮಾಹಿತಿಗಳನ್ನು ನೀಡಿದ್ದು ಅವರ ನಾಮಪತ್ರ ರದ್ದುಗೊಳಿಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗವು ಹಾಸನ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು.ಪಜ್ವಲ್ ಆಸ್ತಿ ವಿವರ-2019ರ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದಾಗ ಚುನಾವಣಾ ಆಯೋಗಕ್ಕೆ ಅವರು ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿದ್ದರು. 4,89,15,029 ಮೌಲ್ಯದ ಸ್ಥಿರಾಸ್ತಿ, 1,68,86,632 ಮೌಲ್ಯದ ಚರಾಸ್ತಿಗಳು ಸೇರಿದ್ದವು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಂದೆ ರೇವಣ್ಣ, ತಾಯಿ ಭವಾನಿ, ಅನಸೂಯ, ಸಿ.ಎನ್. ಪಾಂಡು, ಸಿ.ಎನ್. ಪುಟ್ಟಸ್ವಾಮಿಗೌಡ, ಜಯರಾಂ, ಡಿ.ಕೆ.ನಾಗರಾಜ್, ಕಾಳೇಗೌಡ, ಬೋರೇಗೌಡ, ಶೈಲ ಅವರಿಂದ ಪ್ರಜ್ವಲ್ ಅವರು 3.72 ಕೋಟಿ ಖಾಸಗಿ ಸಾಲ ಪಡೆದಿದ್ದಾರೆ. ಪ್ರಜ್ವಲ್ ಹೆಸರಲ್ಲಿ ಒಟ್ಟು 36 ಎಕರೆ ಕೃಷಿ ಭೂಮಿ ಇದೆ. ಪ್ರಜ್ವಲ್ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 15.58 ಲಕ್ಷ ನಗದು ಇದೆ. ಒಟ್ಟು 37.31 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನೂ ಅವರು ಹೊಂದಿದ್ದಾರೆ. 18 ಹಸುಗಳು, 2 ಎತ್ತುಗಳನ್ನೂ ಪ್ರಜ್ವಲ್ ಸಾಕಿಕೊಂಡಿದ್ದಾರೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಆಯೋಗಕ್ಕೆ ಪ್ರಮಾಣ ಪತ್ರವನ್ನು ಪ್ರಜ್ವಲ್ ರೇವಣ್ಣ ಸಲ್ಲಿಕೆ ಮಾಡಿದ್ದರು.