
ಗ್ರಾಮ ಪಂಚಾಯತಿ ಪಿಡಿಒ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ…
ಚಂದ್ರವಳ್ಳಿ ನ್ಯೂಸ್, ಶಿಕಾರಿಪುರ:
ಬಗನಕಟ್ಟೆ ಗ್ರಾಮ ಪಂಚಾಯತಿ ಪಿಡಿಒ ಮಂಜುನಾಥ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಜೈಲ ಕಂಬಿ ಎಣಿಸುತ್ತಿದ್ದಾರೆ.ಶಿಕಾರಿಪುರ ತಾಲೂಕಿನ ಸಂಕ್ಲಾಪುರ ನಿವಾಸಿ ಸಾಕಮ್ಮ ಎಂಬವರ ಮನೆಯ ಛಾವಣಿ ಮತ್ತು ಗೋಡೆ 2021ರಲ್ಲಿ ಮಳೆಯಿಂದ ಕುಸಿದು ಬಿದ್ದ ಕಾರಣ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪುನರ್ ನಿರ್ಮಾಣಕ್ಕಾಗಿ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿದ್ದರು.
ಮಳೆ ಹಾನಿಯಿಂದ ಮನೆ ಬಿದ್ದು ಹೋಗಿರುವ ಕುರಿತು ಜಿಪಿಎಸ್ ನಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಮಾಡಲು ಬಗನಕಟ್ಟೆ ಗ್ರಾಮ ಪಂಚಾಯತ್ ಪಿಡಿಒ ಮಂಜುನಾಥ್ ಅವರು ಸಾಕಮ್ಮರಿಂದ 20,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು ಆ ಪೈಕಿ 13,000 ರೂ. ಈಗಾಗಲೇ ಪಡೆದಿದ್ದರು. ಆರೋಪಿ ಪಿಡಿಒ ಮಂಜುನಾಥ್ ವಿರುದ್ಧ ಸಾಕಮ್ಮ ಎನ್ನುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು
ಬಾಕಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಉಮೇಶ್, ಈಶ್ವರ ನಾಯ್ಕ, ಪೊಲೀಸ್ ನಿರೀಕ್ಷಕ ಸುರೇಶ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿ ಆರೋಪಿ ಪಿಡಿಒ ಬಂಧಿಸಿದ್ದಾರೆ.