![](https://www.chandravallinews.com/wp-content/uploads/2023/12/WhatsApp-Image-2023-12-02-at-6.10.52-AM-2-1024x682.jpeg)
i
ಪತ್ರಕರ್ತರು ವೃತ್ತಿ ಬದ್ದತೆ ಪಾಲನೆ ಮಾಡಲಿ-ಸಭಾಪತಿ ಬಸವರಾಜ ಹೊರಟ್ಟಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತ್ರಕರ್ತರು ಸಮಾಜದ ಮತ್ತು ಸರ್ಕಾರದ ಅಂಕು-ಡೊಂಕುಗಳನ್ನು ತಿದ್ದುವವರಾಗಿದ್ದು, ವೃತ್ತಿ ಬದ್ದತೆ ಕಾಪಾಡಿಕೊಳ್ಳುವಂತೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿ, ಈ ಬಾರಿ ಸಮರ್ಥ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಪತ್ರಕರ್ತರು ದಿಟ್ಟತನದಿಂದ ಕಾರ್ಯ ನಿರ್ವಹಿಸಬೇಕಾದುದು ಅತ್ಯಗತ್ಯ. ಹಾಗಾಗಿ ಸಮರ್ಥರಿಗೆ ಮನ್ನಣೆ ನೀಡಬೇಕಾದುದು ಎಲ್ಲರ ಕರ್ತವ್ಯ ಎಂದರು.
ನಾನು ಸದನಕ್ಕೆ ಬಂದ ಹೊಸದರಲ್ಲಿ ಏನೇನು ತಪ್ಪು ಮಾಡಿದೆ ಎನ್ನುವುದನ್ನು ಹಿರಿಯ ಪತ್ರಕರ್ತರೇ ತಿದ್ದಿ ಹೇಳುತ್ತಿದ್ದರು. ಹಾಗಾಗಿ ಬಹಳ ಕಲಿಯಲು ಸಾಧ್ಯವಾಯಿತು. ವೃತ್ತಿಪರವಾಗಿ ಅಷ್ಟು ಪ್ರಭುದ್ಧತೆ ಪತ್ರಕರ್ತರಿಗೆ ಇರಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ವೃತ್ತಿ ಭಾಂದವರ ಬಗ್ಗೆ ತೋರುತ್ತಿರುವ ಕಾಳಜಿಯು ನಿಜಕ್ಕೂ ಸ್ತುತ್ಯಾರ್ಹ. ಪತ್ರಿಕಾ ವಿತರಕರನ್ನೂ ಸರ್ಕಾರ ಈ ಬಾರಿ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಅಪಘಾತದಲ್ಲಿ ಮೃತಪಟ್ಟವರಿಗೆ ಮತ್ತು ಆಸ್ಪತ್ರೆಗೆ ಸೇರಿದವರಿಗೆ ನೆರವು ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತರಾದ ಮಾಯಾ ಶರ್ಮಾ, ಪತ್ರಕರ್ತರು ಯಾವ ಪಕ್ಷಕ್ಕೂ ಮತ್ತು ಯಾವ ಪಂಥಕ್ಕೂ ಸೇರಿದವರಲ್ಲ. ಸದಾ ನಿಸ್ಪಕ್ಷಪಾತವಾಗಿ ಕೆಲಸ ಮಾಡುವ ಮೂಲಕ ವೃತ್ತಿ ಬದ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುತ್ತದೆ. ವೃತ್ತಿ ನಿರತರನ್ನು ಕೆಯುಡಬ್ಲ್ಯೂಜೆ ಅಂಗಳದಲ್ಲಿ ಸನ್ಮಾನಿಸತ್ತಿರುವುದು ಅಭಿಮಾನದ ಸಂಗತಿ ಎಂದರು.
ಸುದ್ದಿಮನೆಯ ಹಿರಿಯ ಸುಬ್ಬು ಹೊಲೆಯಾರ್ ಮಾತನಾಡಿ, ವೃತ್ತಿಪರವಾದ ಕೆಯುಡಬ್ಲ್ಯೂಜೆ ಸಂಸ್ಥೆಯಲ್ಲಿ ನನಗೆ ಗೌರವಿಸುತ್ತಿರುವುದು ಅಭಿಮಾನದ ಸಂಗತಿ. ಡಾ.ಅಂಬೇಡ್ಕರ್ ಆಶಯಗಳು ಸಂವಿಧಾನ ಬದ್ದವಾಗಿ ಶೋಷಿತ ಸಮುದಾಯಗಳಿಗೆ ನಿಜ ಅರ್ಥದಲ್ಲಿ ತಲುಪಬೇಕು ಎಂದರು.
ಪತ್ರಕರ್ತ ರಫೀಕ್ ಭಂಡಾರಿ, ಪತ್ರಿಕಾ ವಿತರಕರಾದ ಜವರಪ್ಪ ಅವರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸಭಾಪತಿಗಳ ವಿಶೇಷಾಧಿಕಾರಿ ಡಾ. ಮಹೇಶ್ ವಾಳ್ವೇಕರ್, ಸ್ಪೀಕರ್ ಕಚೇರಿಯ ಸಂಯೋಜಕರಾದ ಜ್ಞಾನಶೇಖರ್ ಅವರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಶೇಷಚಂದ್ರಿಕಾ, ಡಿ. ಉಮಾಪತಿ, ರಾಜ್ಯ ಸಮಿತಿ ಸದಸ್ಯರಾದ ಎನ್.ರವಿಕುಮಾರ್, ಕೆ.ಆರ್.ದೇವರಾಜ್, ಕೋಲಾರದ ವಿ.ಮುನಿರಾಜು, ನಗರ ಘಟಕದ ಪದಾಧಿಕಾರಿಗಳು, ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಬೆಂಗಳೂರು ನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು.