i
ಭದ್ರಾ ಯೋಜನೆಯಲ್ಲಿ ಕಡೆ ಭಾಗದ ತಾಲ್ಲೂಕುಗಳಿಗೆ ಅನ್ಯಾಯವಾಗದಿರಲಿ- ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಭದ್ರಾ ಮೇಲ್ದಂಡೆ ಯೋಜನೆ ಘೋಷಣೆಯಾಗಿ 20 ವರ್ಷವಾಗುತ್ತಾ ಬಂದಿದೆ. ಇದರ ನಡುವೆ ಯೋಜನೆಯ ಮೇಲ್ಭಾಗದ ಪ್ರದೇಶದಲ್ಲಿ ಪರಿಷ್ಕೃತ ಯೋಜನೆಗಳನ್ನು ಸೇರಿಸಿ, ಕೆರೆಗಳಿಗೆ ನೀರು ತುಂಬಿಸುವ ಹಾಗೂ ನೀರಾವರಿ ಯೋಜನೆಗಳನ್ನು ವಿಸ್ತರಿಸುತ್ತಿದ್ದಾರೆ. ಇದರಿಂದಾಗಿ ಕಡೆಯ ಭಾಗದ ತಾಲ್ಲೂಕುಗಳಿಗೆ ಅನ್ಯಾಯವಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಕಳವಳ ವ್ಯಕ್ತಪಡಿಸಿದರು. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ವಿಧಾನ ಸಭೆಯ ಚರ್ಚೆಯ ವೇಳೆ ಅವರು ಮಾತನಾಡಿದರು. ರಾಜ್ಯ ಸರ್ಕಾರ ಹಾಗೂ ಜಲಸಂಪನ್ಮೂಲ ಸಚಿವರು ಈ ಯೋಜನೆಗಳಿಗೆ ಮಿತಿ ನಿಗದಿ ಮಾಡಿ, ಶತ ಶತಮಾನಗಳಿಂದ ವಂಚಿತವಾಗಿರುವ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಿಗೆ ನ್ಯಾಯ ಒದಗಿಸಬೇಕು. ಆರಂಭದಲ್ಲಿ ರೂ.2,500 ಕೋಟಿ ಇದ್ದ ಭದ್ರಾ ಮೇಲ್ದಂಡೆ ಯೋಜನೆ ವೆಚ್ಚ ಇಂದು ರೂ.21,000 ಕೋಟಿಗೆ ಏರಿಕೆಯಾಗಿದೆ. ಇದುವರೆಗೂ ರೂ.7,500 ಕೋಟಿ ವೆಚ್ಚವಾಗಿದೆ. ಆದರೂ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಿಗೆ ಯೋಜನೆ ಲಾಭವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ಆಧರಿಸಿ ಕ್ಷೇತ್ರದ 2,25,151 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇದೇ ಯೋಜನೆಯಲ್ಲಿ ಕ್ಷೇತ್ರದ 367 ಕೆರೆಗಳಿಗೆ ನೀರು ತುಂಬಿಸಲಾಗುವುದು. ಕೇಂದ್ರ ಸರ್ಕಾರ ಬಜೆಟ್ನಲ್ಲಿ ಭದ್ರಾ ಮೆಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ರೂ.5300 ಕೋಟಿ ಅನುದಾನ ಮೀಸಲು ಇರಿಸಿದೆ. ಇದುವರೆಗೂ ಈ ಅನುದಾನ ಹಣ ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾಗಿಲ್ಲ. ಕೇಂದ್ರ ಅನುದಾನ ದೊರಕಿದರೆ ಯೋಜನೆ ಕಾಮಗಾರಿಗೆ ವೇಗ ದೊರಯಲಿದೆ ಎಂದು ಶಾಸಕ ರಘುಮೂರ್ತಿ ಅಭಿಪ್ರಾಯಪಟ್ಟರು.