i
ಹೊಸದುರ್ಗ-ಹೊಳಲ್ಕೆರೆ, ಹಿರಿಯೂರು-ಹುಳಿಯಾರು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ-ಸಚಿವ ನಾರಾಯಣಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ-ಹೊಳಲ್ಕೆರೆ, ಹಿರಿಯೂರು-ಹುಳಿಯಾರು ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದ ಎ. ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಗೌರವ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೆ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಬಿ.ಜಿ.ಕೆರೆ ಬಳಿ ದ್ವಿ ಚಕ್ರ ವಾಹನ ಹಾಗೂ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು 2 ತಿಂಗಳ ಕಾಲವಕಾಶ ಬೇಕಾಗಿದೆ. ನಂತರ 4 ತಿಂಗಳ ಅವಧಿಯಲ್ಲಿ ಸೇತುವೆಯನ್ನು ಅಳವಡಿಸಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಅವಹಾಲುಗಳು ಪ್ರತಿನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿವೆ. ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೊಸದುರ್ಗ-ಹೊಳಲ್ಕೆರೆ ಹಾಗೂ ಹಿರಿಯೂರು-ಹುಳಿಯಾರು ರಾಷ್ಟ್ರೀಯ ಹೆದ್ದಾರಿ ಮಾರ್ಗಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈಗಾಗಲೆ ನಿಗದಿತ ಕಾಲಾವಧಿ ಮುಗಿದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಭವನಗಳನ್ನು ಸ್ತ್ರೀಶಕ್ತಿ ಸಂಘ ಅಥವಾ ಗ್ರಂಥಾಲಯಗಳಿಗೆ ನೀಡಿ:
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸರ್ಕಾರದ ಅನುದಾನದಡಿ ನಿರ್ಮಿಸಲಾಗಿರುವ ವಿವಿಧ ಭವನಗಳು ಬಳಕೆಯಾಗದೆ ಹಾಳಾಗುತ್ತಿವೆ. ಇಂತಹ ಭವನಗಳನ್ನು ಸ್ತ್ರೀಶಕ್ತಿ ಸಂಘಗಳಿಗೆ ಅಥವಾ ಗ್ರಂಥಾಲಯಗಳಿಗೆ ಬಳಕೆ ಮಾಡಿಕೊಳ್ಳಲು ನೀಡುವಂತೆ ಈ ಹಿಂದೆ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿತ್ತು, ಆದರೆ ಇದುವರೆಗೂ ಇದು ಜಾರಿಗೊಂಡಿಲ್ಲ ಎಂದ ಸಚಿವರು, ಈ ಬಗ್ಗೆ ಕೂಡಲೆ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚನೆ ನೀಡಿದರು.
ಆದರ್ಶ ಗ್ರಾಮಗಳಲ್ಲಿ ನರೇಗಾ ಕನ್ವರ್ಜೆನಸ್ ಮಾಡಿ ಕಾಮಗಾರಿ ಕೈಗೊಳ್ಳಿ : ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಆದರ್ಶ ಗ್ರಾಮಗಳಿಗೆ ನರೇಗಾ ಯೋಜನೆಯಡಿ ಕನ್ವರ್ಜೆನ್ಸ್ ಮಾಡಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು, ಈ ಮೂಲಕ ಉದ್ಯೋಗಖಾತ್ರಿ ಯಡಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದ್ದು, ಮಾನವ ದಿನಗಳನ್ನು ಕೂಡ ಸೃಜಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಈ ಕಾರ್ಯ ಆಗಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಪರಿಶಿಷ್ಟ ಯೋಜನೆಯಡಿ 97 ಆದರ್ಶ ಗ್ರಾಮಗಳು ಆಯ್ಕೆಗೊಂಡಿದ್ದು, 710 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಶಿಷ್ಟ ಪಂಗಡ ಯೋಜನೆಯಡಿ 34 ಗ್ರಾಮಗಳು ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿದು, ಇಲ್ಲಿ ಒಟ್ಟು 206 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
3 ಲಕ್ಷ ಎಬಿಎಆರ್ಕೆ ಕಾರ್ಡ್ ವಿತರಣೆಗೆ ಗುರಿ:
ರಾಜ್ಯ ಸರ್ಕಾರ 3 ತಿಂಗಳಲ್ಲಿ ಜಿಲ್ಲೆಯಲ್ಲಿ 1.5 ಲಕ್ಷ ಆಯುಷ್ಮನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ವಿತರಣೆಗೆ ಗುರಿ ನೀಡಿದೆ. ಆದರೆ ಜಿಲ್ಲೆಯಲ್ಲಿ ಕಾರ್ಡು ವಿತರಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಅಭಿಯಾನದಲ್ಲಿ 3 ಲಕ್ಷ ಕಾರ್ಡ್ ವಿತರಿಸಿಲು ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಕಾರ್ಡು ವಿತರಣೆಯ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲಾ ಕುಟುಂಬಗಳಿಗೂ ಕಾರ್ಡು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಸಭೆಯಲ್ಲಿ ಹೇಳಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆಗೆ ಶೀಘ್ರ ಭೂಸ್ವಾಧೀನ ಪೂರ್ಣ :
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಗೆ ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಒಟ್ಟು 101 ಕಿ.ಮೀ. ಮಾರ್ಗಕ್ಕಾಗಿ 1211.13 ಎಕರೆ ಭೂಮಿಗಾಗಿ ಬೇಡಿಕೆ ಸಲ್ಲಿಸಿದಂತೆ ಈಗಾಗಲೆ 639.09 ಎಕರೆ ಭೂಸ್ವಾಧೀನಕ್ಕಾಗಿ ಪರಿಹಾರ ವಿತರಿಸಲಾಗಿದೆ. ಉಳಿದಂತೆ 572.04 ಎಕರೆ ಭೂಸ್ವಾಧೀನ ವಿವಿಧ ಹಂತದಲ್ಲಿದೆ. ಭರಮಸಾಗರ-ಚೋಳಗಟ್ಟದವರೆಗೆ 36 ಕಿ.ಮೀ. ಪ್ರದೇಶದಲ್ಲಿ 281 ಎಕರೆ ಪ್ರದೇಶವನ್ನು ಈಗಾಗಲೆ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ್ದು, ಉಳಿದ 67.24 ಎಕರೆ ಜಮೀನು ಶೀಘ್ರ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಿಳಿಸಿದರು. ಈ ತಿಂಗಳ ಅಂತ್ಯದೊಳಗೆ ಶೇ. 90 ರಷ್ಟು ಭೂಸ್ವಾಧೀನ ಕಾರ್ಯ ಪೂರ್ಣಗೊಳಿಸಿ, ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವಂತೆ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್, ಜಿ.ಪಂ. ಯೋಜನಾ ನಿರ್ದೇಶಕ ಡಾ. ರಂಗಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.