i
ತಿಂಗಳೊಳಗೆ ಜನ ಸ್ಪಂದನೆ ಅರ್ಜಿ/ಅಹವಾಲು ಬಗೆಹರಿಸಿ: ಸಿದ್ದರಾಮಯ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎರಡನೇ ಜನಸ್ಪಂದನದ ಬಳಿಕ ಮುಖ್ಯಮಂತ್ರಿಗಳು ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಇಂದಿನ ಜನ ಸ್ಪಂದನೆಯಲ್ಲಿ 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. 20 ಸಾವಿರ ಮಂದಿ ಭಾಗಿ ಆಗಿದ್ದಾರೆ ಎಂದು ತಿಳಿಸಿದರು.
ಆಯಾ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಸಮಯ ಮಿತಿಯೊಳಗೆ ಬಗೆ ಹರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರ ವ್ಯಾಪ್ತಿಯ ಅರ್ಜಿಗಳನ್ನು ಆದಷ್ಟು ಬೇಗ ಪರಿಹರಿಸಲು ಸೂಚನೆ ನೀಡಲಾಗಿದೆ ಎಂದರು.
ಮೊದಲ ಜನ ಸ್ಪಂದನೆಯಲ್ಲಿ ಬಂದ ಅರ್ಜಿಗಳಲ್ಲಿ 98% ಪರಿಹಾರ ದೊರಕಿವೆ. ಈ ಬಾರಿಯೂ ಅಷ್ಟೇ ತ್ವರಿತವಾಗಿ ಪರಿಹಾರ ಒದಗಿಸಲು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳು ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಬೆಂಗಳೂರಿಗೆ ಜನ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೇಲೆ ಈ ಜವಾಬ್ದಾರಿ ಹೆಚ್ಚು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಆಡಳಿತ ಜಡತ್ವದಿಂದ ಕೂಡಿರಬಾರದು. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತೇನೆ. ನಿಮ್ಮ ಹಂತದಲ್ಲೇ ಸಮಸ್ಯೆ ಬಗೆಹರಿಸಿ ಎನ್ನುವ ಎಚ್ಚರಿಕೆ ಕೊಡುತ್ತೇನೆ. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಒಂದು ತಿಂಗಳೊಳಗೆ ಹೆಚ್ಚು ಅರ್ಜಿ, ಅಹವಾಲು ಪರಿಹರಿಸಿ ಎಂದು ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸಿದರು.