![](https://www.chandravallinews.com/wp-content/uploads/2024/02/WhatsApp-Image-2024-02-10-at-4.15.30-PM-1.jpeg)
i
ಭದ್ರಾ ಧರಣಿ ಸತ್ಯಾಗ್ರಹಕ್ಕೆ ಚಳ್ಳಕೆರೆ ಮೊಳಕಾಲ್ಮೂರು ರೈತ ಸಂಘ ಬೆಂಬಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಕಾಯ್ದಿರಿಸಿರುವ ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸದಿರುವುದನ್ನು ವಿರೋಧಿಸಿ ಕಳೆದ ಆರು ದಿನಗಳಿಂದಲೂ ಜಿಲ್ಲಾ ಪಂಚಾಯಿತಿ ಮುಂಭಾಗ ಧರಣಿ ನಡೆಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ ಹಾಗೂ ವಿವಿಧ ಜನಪರ ಸಂಘಟನೆಗಳವರು ಶನಿವಾರ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ 6ನೇ ದಿನ ಧರಣಿ ಸತ್ಯಾಗ್ರಹಕ್ಕೆ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳ ರೈತ ಸಂಘಟನ ಗಳು ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಈಚಘಟ್ಟ ಸಿದ್ದವೀರಪ್ಪ, ಸದಾ ಬರಗಾಲವನ್ನೆ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಸಾಲಗಾರರಾಗಿ ಹೈರಾಣಾಗಿದ್ದಾರೆ. ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ನೀರಾವರಿ ಯೋಜನೆಗಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ರೈತರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಗುರವಾಗಿ ಕಾಣುತ್ತಿವೆ. ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಕೇಂದ್ರ ಸರ್ಕಾರ ಕಾಯ್ದಿರಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಕೂಡಲೆ ಬಿಡುಗಡೆಗೊಳಿಸಿ ಕಾಮಗಾರಿಗೆ ಚುರುಕು ಮುಟ್ಟಿಸಿ ನೀರು ಹರಿಸಬೇಕು. ಇಲ್ಲವಾದಲ್ಲಿ ಧರಣಿಯನ್ನು ಉಗ್ರ ಸ್ವರೂಪಕ್ಕೆ ಕೊಂಡೊಯ್ಯಲಾಗುವುದೆಂದು ಎಚ್ಚರಿಸಿದರು.
ರೈತ ಮುಖಂಡ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ರೈತರು ಮಳೆಯನ್ನೇ ಆಧರಿಸಿ ಕೃಷಿಯನ್ನು ನಂಬಿಕೊಂಡಿದ್ದಾರೆ. ಇಂತಹ ಸಂಕಷ್ಠದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಭದ್ರಾಮೇಲ್ದಂಡೆ ಯೋಜನೆಗಾಗಿ ಕಾಯ್ದಿರಿಸಿರುವ ಹಣವನ್ನು ಬಿಡುಗಡೆಗೊಳಿಸಲು ಮೀನಾ ಮೇಷ ಎಣಿಸುತ್ತಿದೆ. ರೈತರನ್ನು ತಿರಸ್ಕಾರ ಮನೋಭಾವದಿಂದ ಕಾಣುವುದು ಸರಿಯಲ್ಲ. ಕೂಡಲೆ ಯೋಜನೆಯನ್ನು ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮೊಳಕಾಲ್ಮೂರು ತಾಲೂಕು ರವಿ, ಹಿರಿಯೂರು ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಹನುಮೇಶ್ ಟಿ.ಎಮ್ಮಿಗನೂರು, ರಂಗಸ್ವಾಮಿ, ವಿಜಯಕುಮಾರ್, ಗೌರಮ್ಮ, ಅನುಸೂಯಮ್ಮ, ಮಂಜುಳ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.