i
ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿವಾಸದ ಮೇಲೆ ಸಿಬಿಐ ದಾಳಿ…
ಚಂದ್ರವಳ್ಳಿ ನ್ಯೂಸ್, ಜಮ್ಮುಃ
ಕಿರು ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದ ತನಿಖೆಯ ಭಾಗವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿವಾಸ ಸೇರಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. 100 ಅಧಿಕಾರಿಗಳನ್ನೊಳಗೊಂಡ ತಂಡವು ಗುರುವಾರ ಬೆಳಗ್ಗೆ ವಿವಿಧ ನಗರಗಳಲ್ಲಿನ 30 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಆಗಸ್ಟ್ 23, 2018ರಿಂದ ಅಕ್ಟೋಬರ್ 30, 2019ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಮಲಿಕ್ ಅವರು ಕಿರು ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದ ಎರಡು ಕಡತಗಳನ್ನು ತೆರವುಗೊಳಿಸಲು 300 ಕೋಟಿ ರೂಪಾಯಿ ಲಂಚದ ಆಫರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಏನಿದು ಪ್ರಕರಣ?
2019ರಲ್ಲಿ ಖಾಸಗಿ ಕಂಪನಿಯೊಂದಕ್ಕೆ ಕಿರು ಜಲವಿದ್ಯುತ್ ಯೋಜನೆ (ಎಚ್ಇಪಿ)ಗಾಗಿ ಸುಮಾರು 2,200 ಕೋಟಿ ಮೌಲ್ಯದ ಸಿವಿಲ್ ಕಾಮಗಾರಿಯ ಗುತ್ತಿಗೆಯನ್ನು ನೀಡುವಲ್ಲಿ ಅವ್ಯವಹಾರದ ಆರೋಪಗಳಿಗೆ ಈ ತನಿಖೆ ಸಂಬಂಧಿಸಿದೆ. ಏಪ್ರಿಲ್ 20, 2022ರಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮನವಿ ಮೇರೆಗೆ ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ. ಅಂದಿನ ಕಿರು ಜಲವಿದ್ಯುತ್ ಯೋಜನೆಯ ಚಯರ್ ಮ್ಯಾನ್, ಎಂಡಿ, ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ನ ಇಬ್ಬರು ನಿರ್ದೇಶಕರು, ಖಾಸಗಿ ಕಂಪನಿ ಮತ್ತು ಇತರ ಅಪರಿಚಿತರ ವಿರುದ್ಧ ಅವ್ಯವಹಾರದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.