i
ಕೋಲಾರ ಕಾಂಗ್ರೆಸ್ ಟಿಕೆಟ್: ಹೊಸ ಅಭ್ಯರ್ಥಿ ಘೋಷಣೆ ಸಾಧ್ಯತೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಎಚ್. ಮುನಿಯಪ್ಪ ಹಾಗೂ ಹಿರಿಯ ನಾಯಕ ರಮೇಶ್ ಕುಮಾರ್ ನಡುವಣ ಬಣ ಬಡಿದಾಟ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದ್ದು, ನಿನ್ನೆ ನಡೆದ ಸಂಧಾನ ಸಭೆಯೂ ಯಶಸ್ವಿಯಾದಂತೆ ಕಂಡುಬರುತ್ತಿಲ್ಲ. ಹೀಗಾಗಿ ಬಣ ಬಡಿದಾಟದಲ್ಲಿ ಯಾವುದೇ ಬಣಕ್ಕೆ ಸೇರದ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಎಂಬಂತಹ ಊಹಾಪೋಹಗಳು ದಟ್ಟವಾಗಿವೆ. ಆದರೆ, ಇಂತಹ ಯೋಜನೆಗಳು ಫಲಿತಾಂಶ ಆಧಾರಿತವಾಗಲ್ಲ ಎಂದು ಮುನಿಯಪ್ಪ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಮಾಜಿ ವಿಧಾನಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ನೇತೃತ್ವದ ಬಣಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಗ್ಗೂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗುರುವಾರ ಕೋಲಾರ ಭಾಗದ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡೆಸಿದ ಸಭೆಯಲ್ಲಿ ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಣ್ಣ ಅವರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಎಸ್ಸಿ (ಬಲ) ಪಂಗಡದ ಯಾರನ್ನಾದರೂ ಕಣಕ್ಕಿಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸದ್ಯಕ್ಕೆ ಕೋಲಾರದಲ್ಲಿ ಎರಡು ಬಣಗಳಿಂದ ಹೊರತಾದ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿಎಂ ಮುನಿಯಪ್ಪ, ಮಾಜಿ ಮೇಯರ್ ವಿಜಯ್ ಕುಮಾರ್ ಪುತ್ರ ಗೌತಮ್ ಅವರ ಹೆಸರು ಇದೆ. ಇವರಿಬ್ಬರೂ ಪರಿಶಿಷ್ಟ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ ಗೌತಮ್ ಹೆಸರು ಮುಂಚೂಣಿಯಲ್ಲಿದೆ. ಇವರ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿ ಹೈಕಮಾಂಡ್ ಗೆ ಕಳುಹಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.