i
ಏಪ್ರಿಲ್-19 ರಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮತಯಾಚನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಗೋವಿಂದ ಕಾರಜೋಳರವರ ಪರವಾಗಿ ಮತಯಾಚನೆ ಮಾಡಲು ಜೆಡಿಎಸ್ ಪಕ್ಷದ ಹಿರಿಯ ದುರೀಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಏ.19ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪಾವಗಡದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಶುರಾಮಪುರದಲ್ಲಿ ಮಧ್ಯಾಹ್ನ ೧.೩೦ಕ್ಕೆ ಸಾರ್ವಜನಿಕ ಸಭೆ, ಹಿರಿಯೂರು ನೆಹರು ಮೈದಾನದಲ್ಲಿ ಮಧ್ಯಾಹ್ನ 3.30ಕ್ಕೆ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಸಂಜೆ 4.30ಕ್ಕೆ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಸಾರ್ವಜನಿಕ ಸಭೆ ಮಾಡಿ ಮತಯಾಚನೆ ಮಾಡುವರು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ತಿಳಿಸಿದ್ಧಾರೆ. ಅವರು, ಈ ಬಗ್ಗೆ ಮಾಹಿತಿ ನೀಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಪರ ಮತಯಾಚನೆ ಮಾಡಲು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡ, ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಅವರು ಮತಯಾಚನೆ ಮಾಡುವರು. ಅಭ್ಯರ್ಥಿ ಗೋವಿಂದಕಾರಜೋಳರವರ ಗೆಲುವಿಗೆ ಮತದಾರರು ಸಹಕರಿಸುವಂತೆ ಅವರು ಮನವಿ ಮಾಡಲಿದ್ದಾರೆ.
ಈ ಎಲ್ಲ ಸಾರ್ವಜನಿಕ ಸಭೆಗಳಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನ ಯಶಸ್ವಿಗೊಳಿಸುವಂತೆ ಜಯಣ್ಣ ಕರೆ ನೀಡಿದ್ದಾರೆ.ಈ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಪಾವಗಡ ತಿಮ್ಮರಾಯಪ್ಪ, ಬಿಜೆಪಿ ಸಂಚಾಲಕ ಲಿಂಗಮೂರ್ತಿ, ಶಾಸಕ ಎಂ.ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇಗೌಡ, ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ತುಮಕೂರು ಜಿಲ್ಲಾಧ್ಯಕ್ಷ ಅಂಜಿನಪ್ಪ, ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಸೇರಿದಂತೆ ಮತ್ತಿತರ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.