i
ಐಸ್ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಅನುಮಾನಾಸ್ಪದ ಸಾವು…
ಚಂದ್ರವಳ್ಳಿ ನ್ಯೂಸ್, ಶ್ರೀರಂಗಪಟ್ಟಣ:
ಐಸ್ಕ್ರೀಂ ತಿಂದ ಬಳಿಕ ಅವಳಿ ಮಕ್ಕಳಿಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶೂಲ್ ಹಾಗೂ ತ್ರಿಶಾ ಸಾವನ್ನಪ್ಪಿದ ಮಕ್ಕಳು. ತಳ್ಳುವ ಗಾಡಿಯಾತನಿಂದ ಐಸ್ ಕ್ರೀಂ ಖರೀದಿಸಿ ಮಕ್ಕಳಿಗೆ ತಾಯಿ ತಿನ್ನಿಸಿದ್ದರು. ಐಸ್ ಕ್ರೀಂ ತಿಂದ ಕೆಲವೇ ಸಮಯದಲ್ಲಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತರಾದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅವರೊಂದಿಗೆ ಐಸ್ ಕ್ರೀಂ ತಿಂದಿದ್ದ ಪೂಜಾ ಕೂಡ ಅಸ್ವಸ್ಥಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ಗ್ರಾಮದ ಬೇರೆ ಮಕ್ಕಳು ಕೂಡ ಆತನಿಂದಲೇ ಐಸ್ಕ್ರೀಂ ಖರೀದಿಸಿ ತಿಂದಿದ್ದರು. ಬೇರೆ ಯಾರಿಗೂ ತೊಂದರೆ ಆಗಿಲ್ಲ. ಅವಳಿ ಮಕ್ಕಳ ಸಾವಿಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ. ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.