i
ಮತಗಟ್ಟೆ ಅಧಿಕಾರಿ ಶಿಕ್ಷಕಿ ಕವಿತಾ ಸಾವು ಸೇರಿ ಇಬ್ಬರು ಶಿಕ್ಷಕಿಯರು ಸಾವು…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಚುನಾವಣಾ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿ ಶಿಕ್ಷಕಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ನಗರದ ರೋಜಿಪುರ ಮತಗಟ್ಟೆ ಸಂಖ್ಯೆ 155 ರಲ್ಲಿಚುನಾವಣಾ ಕಾರ್ಯನಿರ್ವಹಿಸುತ್ತಿದ್ದ ಕವಿತಾ ಮೃತಪಟ್ಟವರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಮೇಗಳ ಗೊಲ್ಲರಹಟ್ಟಿಯಲ್ಲಿ ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯಶೋಧಮ್ಮ ಕೂಡ ಹೃದಯಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ಹೀಗಾಗಿ ಎರಡು ಲೋಕಸಭಾ ಕ್ಷೇತ್ರಗಳಿಂದ ಒಟ್ಟು ಇಬ್ಬರು ಶಿಕ್ಷಕಿಯರು ಹೃದಯಾಘಾತಕ್ಕೆ ಒಳಗಾಗಿ ಸಾವು ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ನೆಲಮಂಗಲ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದ ನಿವಾಸಿ ಕವಿತಾ ಅವರು, ತಾಲೂಕಿನ ಬೂಚನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶುಕ್ರವಾರ ಸಂಜೆ ಮತದಾನ ಮುಗಿದು, ಚುನಾವಣಾ ಸಾಮಗ್ರಿಗಳನ್ನು ಪ್ಯಾಕ್ ಮಾಡುವ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಶಿಕ್ಷಕಿ ಕವಿತಾ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು.
ಮೃತರ ಅಗಲಿಕೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಂಬನಿಮಿಡಿದಿದ್ದಾರೆ.