i
ಡಿಕೆಶಿ ಅವರನ್ನ ಸಂಪುಟದಿಂದ ವಜಾಗೊಳಿಸಿ ತನಿಖೆ ಮುಂದುವರಿಸಲಿ-ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪದಲ್ಲಿ ನಡೆಯುತ್ತಿರುವ ಪ್ರಜ್ವಲ್ರೇವಣ್ಣ ಪ್ರಕರಣದ ತನಿಖೆಯಿಂದ ವಾಸ್ತವ ಹೊರಬರುವುದಿಲ್ಲ, ನೈಜ ವರದಿ ಬರಬೇಕಾದರೆ ಕೂಡಲೇ ಉಪಮುಖ್ಯಮಂತ್ರಿಯನ್ನ ಸಂಪುಟದಿಂದ ವಜಾಗೊಳಿಸಬೇಕೆಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಮಾತನಾಡಿ, ಡಿಕೆಶಿ ಅಂಥ ವ್ಯಕ್ತಿಯನ್ನು ಸಂಪುಟದಲ್ಲಿ ಇಟ್ಟುಕೊಂಡು ತನಿಖೆ ಮಾಡಿದರೆ ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಸಂಪುಟದಿಂದ ವಜಾಗೊಳಿಸಿ ತನಿಖೆ ಮುಂದುವರಿಸಲಿ ಎಂದು ಆಗ್ರಹಿಸಿದರು.
ಡಿ ಕೆ ಶಿವಕುಮಾರ್ಅವರ ಇತಿಹಾಸ ಎಲ್ಲರಿಗೂ ಗೊತ್ತು. ಒಳಸಂಚು ಮಾಡಿ ರೇವಣ್ಣ ಅವರನ್ನ ವಶಕ್ಕೆ ಪಡೆದ್ರಲ್ಲ ಸಿಎಂ ಅವರೇ. ಮೊದಲ ಕ್ಯಾಬಿನೆಟ್ನಿಂದ ಡಿ ಕೆ ಶಿವಕುಮಾರ್ಅವರನ್ನು ಕಿತ್ತಾಕಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಪದೇ ಪದೇ ನಮ್ಮ ಹೆಸರನ್ನ ಬಳಸಿಕೊಳ್ಳುತ್ತಿದ್ದ ಹಿನ್ನೆಲೆ ತಡೆಯಾಜ್ಞೆ ತಂದಿದ್ದೇನೆ. ನಾನು ಇಲ್ಲಿ ಇವತ್ತು ಜನಪ್ರತಿನಿಧಿಯಾಗಿ, ಶಾಸಕಾಂಗ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ಕೂತಿದ್ದೇನೆ. ನನ್ನ ವೈಯಕ್ತಿಕ ಅಲ್ಲ ಇದು, ರಾಜ್ಯದ ಬೆಳವಣಿಗೆಯ ಹಿನ್ನೆಲೆಯಲ್ಲಿ ಜನತೆ ಮುಂದೆ ತರಲು ಇಲ್ಲಿ ಬಂದು ಮಾತನಾಡಿದ್ದೇನೆ ಎಂದು ತಿಳಿಸಿದರು. ಪ್ರಜ್ವಲ್ ಪ್ರಕರಣದಲ್ಲಿ 16 ವರ್ಷ ವಯಸ್ಸಿನ ಬಾಲಕಿಯೂ ಸಂತ್ರಸ್ತೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ. ಯಾವ ಆಧಾರದ ಮೇಲೆ ಕಾಂಗ್ರೆಸ್ನಾಯಕರಾದ ರಾಹುಲ್ ಗಾಂಧಿ ಆ ಹೇಳಿಕೆ ನೀಡಿದರು? ಆ ಬಗ್ಗೆ ಇದುವರೆಗೂ ಯಾಕೆ ಎಸ್ಐಟಿ ತನಿಖೆ ಮಾಡಿಲ್ಲ? 400 ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ ಎನ್ನುತ್ತಾರೆ. ಹಾಗಾದರೆ ಯಾಕೆ ರಾಹುಲ್ ಗಾಂಧಿಯವರನ್ನು ಎಸ್ಐಟಿ ಬಂಧಿಸಿ ಸಾಕ್ಷಿ ಪಡೆಯದೇ ಇನ್ನು ಏಕೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.ಪ್ರಜ್ವಲ್ ರೇವಣ್ಣರನ್ನು ಬೆಂಬಲಿಸಿಯೋ ಅಥವಾ ವಹಿಸಿಕೊಂಡೋ ಮಾತನಾಡುತ್ತಿಲ್ಲ. ಒಂದು ತನಿಖೆ ಪ್ರಾರಂಭ ಮಾಡಿದಾಗ ಮಾಹಿತಿ ಸೋರಿಕೆ ಆಗಬಾರದು. ಸರ್ಕಾರಕ್ಕೆ, ಸಂತ್ರಸ್ತೆಯರಿಗೆ ರಕ್ಷಣೆ ಕೊಡುವುದು ಬೇಕಾಗಿಲ್ಲ. ಈ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಪ್ರಚಾರ ಅಷ್ಟೇ. ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ಪರ ಬೇಲೂರಿನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು. ಅಂದು ಪ್ರಜ್ವಲ್ ಪಕ್ಕದಲ್ಲಿ ಕುಳಿತ ಹೆಣ್ಣು ಮಗಳು ಯಾರು? ಅತ್ಯಾಚಾರ ಆಗಿದ್ರೆ ಆ ಹೆಣ್ಮಗಳು ಯಾಕೆ ಒಂದೇ ವೇದಿಕೆಯಲ್ಲಿ ಇರುತ್ತಿದ್ದರು? ಪ್ರಜ್ವಲ್ ಪಕ್ಕ ಆ ಹೆಣ್ಣು ಮಗಳು ಯಾಕೆ ಕುಳಿತುಕೊಳ್ಳುತ್ತಿದ್ದರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.ಬಿಜೆಪಿ-ಜೆಡಿಎಸ್ ಮೈತ್ರಿ ಆದ ಮೇಲೆ ಕಾಂಗ್ರೆಸ್ಇಷ್ಟೆಲ್ಲ ಕುತಂತ್ರ ನಡೆಸಿದೆ. ಕಾಂಗ್ರೆಸ್ ಗ್ಯಾರಂಟಿಗಳಿಂದ 25 ಸೀಟು ಗೆಲ್ಲುತ್ತೀವಿ ಅಂತ ತಿಳಿದುಕೊಂಡಿದ್ದರು, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಹಿನ್ನೆಡೆಯ ಬೆಳವಣಿಗೆಗಳು ನೆಡೆದಿದವು.
ಇನ್ನೂ ಕಾಂಗ್ರೆಸ್ ಪಕ್ಷದ ಒಂದು ಟೀಮ್ ನಾವು ಒಕ್ಕಲಿಗ ನಾಯಕರು, ಒಕ್ಕಲಿಗರನೆಲ್ಲ ಜೇಬಿನಲ್ಲಿ ಇಟ್ಟುಕೊಂಡಿದ್ದೇನೆ, ನಮ್ಮ ಜೊತೆ ಬಂದಾಯ್ತು ಎಂದು ಅಂದುಕೊಂಡಿದ್ರಲ್ಲ ಅವರಿಗೆ ಪೆಟ್ಟಾಯ್ತು. ಚುನಾವಣೆಯ ಫಲಿತಾಂಶ ಏನೆಂದು ಗೊತ್ತಾಗಿದೆ. ಚುನಾವಣೆಯ ಫಲಿತಾಂಶ ನಂತರ ಅವರ ಮುಂದಿನ ಭವಿಷ್ಯ ಏನಾಗುತ್ತೆ ಎಂದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರಿಗೆ ತಳಮಳ ತಂದಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿ ಸಮಗ್ರವಾದ ತನಿಖೆ ಮಾಡಬೇಕಾದರೆ ವಸ್ತುನಿಷ್ಠೆ ತನಿಖಾ ವರದಿ ಬರಬೇಕಾದರೆ ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.