i
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಧಿಸೂಚನೆ ಪ್ರಕಟ : ಟಿ.ವೆಂಕಟೇಶ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜೂನ್-21ರಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಜೂನ್ 03ರಂದು ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಸಲು ಅಧಿಸೂಚನೆ ಪ್ರಕಟಿಸಿದೆ. ಈ ಚುನಾವಣೆಗೆ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು. ಕ್ಷೇತ್ರದ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ. ಈ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿ, ಈಗಾಗಲೇ ನಡೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿಗಳು, ನಿಯೋಜಿತ ಅಧಿಕಾರಿಗಳ ತಂಡಗಳ ಕಾರ್ಯ ಜೂನ್ ೦೬ರವರೆಗೆ ವಿಧಾನ ಪರಿಷತ್ ಚುನಾವಣೆಯ ನೀತಿಸಂಹಿತೆ ಪೂರ್ಣಗೊಳ್ಳುವವರೆಗೂ ಮುಂದುವರೆಯಲಿವೆ. ಚೆಕ್ಪೋಸ್ಟ್ಗಳು, ತನಿಖಾ ತಂಡಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯುವ ಹಣಕಾಸು ವಹಿವಾಟುಗಳ ಬಗ್ಗೆಯೂ ಸೂಕ್ಷ್ಮವಾಗಿ ಕಣ್ಣಿಡಲಾಗುವುದು ಎಂದರು. ಈ ಚುನಾವಣೆಯೂ ಕೂಡ ಶಾಂತಿಯುತವಾಗಿ, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ೪೬೧೫ಮತದಾರರಿದ್ದು, ಜೂನ್ ೦೩ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ ಎಂದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ೨೦೨೩ರ ಡಿಸೆಂಬರ್ ೩೦ರಂದು ಪ್ರಕಟಿಸಲಾಗಿದೆ. ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೩೨೩೮ ಪುರುಷರು, ೧೩೭೭ ಮಹಿಳೆಯರು ಸೇರಿದಂತೆ ಒಟ್ಟು ೪೬೧೫ ಶಿಕ್ಷಕ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಂತೆ ಮೊಳಕಾಲ್ಮೂರು ತಾಲೂಕಿನಲ್ಲಿ ೨೧೦ಪುರುಷರು, ೪೩ಮಹಿಳೆಯರು ಸೇರಿದಂತೆ ಒಟ್ಟು ೨೫೩ ಶಿಕ್ಷಕ ಮತದಾರರು, ಚಳ್ಳಕೆರೆ ತಾಲೂಕಿನಲ್ಲಿ ೬೮೩ಪುರುಷರು, ೨೨೦ಮಹಿಳೆಯರು ಸೇರಿ ಒಟ್ಟು ೯೦೩ ಶಿಕ್ಷಕರು, ಚಿತ್ರದುರ್ಗ ತಾಲೂಕಿನಲ್ಲಿ ೯೨೯ ಪುರುಷರು, ೫೯೦ಮಹಿಳೆಯರು ಸೇರಿ ಒಟ್ಟು ೧೫೧೯ಶಿಕ್ಷಕರು, ಹಿರಿಯೂರು ತಾಲೂಕಿನಲ್ಲಿ ೫೭೧ಪುರುಷರು, ೨೫೧ ಮಹಿಳೆಯರು ಸೇರಿ ಒಟ್ಟು ೮೨೨ ಶಿಕ್ಷಕರು, ಹೊಸದುರ್ಗ ತಾಲೂಕಿನಲ್ಲಿ ೪೯೯ಪುರುಷರು, ೧೬೬ಮಹಿಳೆಯರು ಸೇರಿ ಒಟ್ಟು ೬೬೫ಶಿಕ್ಷಕರು ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ೩೪೬ಪುರುಷರು, ೧೦೭ಮಹಿಳೆಯರು ಸೇರಿ ಒಟ್ಟು೪೫೩ ಶಿಕ್ಷಕರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೪೬೧೫ ಶಿಕ್ಷಕರು ಮತದಾರರು ಇದ್ದಾರೆ ಎಂದರು. ಇಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮೇ೧೬ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಮೇ ೧೭ರಂದು ನಾಮಪತ್ರಗಳ ಪರಿಶೀಲನೆ, ಮೇ ೨೦ರಂದು ಉಮೇದುವಾರರು ತಮ್ಮ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ. ಜೂನ್ ೦೩ರಂದು ಬೆಳಿಗ್ಗೆ ೮ರಿಂದ ಸಂಜೆ ೪ರವರಗೆ ಮತದಾನ ನಡೆಯಲಿದ್ದು, ಜೂನ್ ೦೬ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಕಾರ್ತೀಕ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.