![](https://www.chandravallinews.com/wp-content/uploads/2024/05/dk-1-1.jpeg)
i
ಚುನಾವಣೆಗಾಗಿ ಅಶ್ಲೀಲ ವಿಡಿಯೋ ವಿತರಿಸಿದ್ದು ಅಪರಾಧ ಅಲ್ವಾ?-ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಮೈಸೂರು:
ಅಶ್ಲೀಲ ವಿಡಿಯೋ ಮಾಡಿರುವುದು ಒಂದು ಭಾಗದ ಅಪರಾಧ ಆದರೆ ಆ ವಿಡಿಯೋವನ್ನು ಚುನಾವಣೆಗಾಗಿ ವಿತರಿಸಿದ್ದು ಅಪರಾಧ ಅಲ್ವಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರಾಯೋಜಕತ್ವದಲ್ಲಿ ಮೇ 30 ರಂದು ಹಾಸನದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಹೇಳಿದ್ದರೆ ನಾನೇ ಒಂದಿಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳುಹಿಸುತ್ತಿದ್ದೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಳಿ ಇರುವವರೆಲ್ಲ ಭಯೋತ್ಪಾದಕರು, ನನಗೆ ಡಿಕೆ ಶಿವಕುಮಾರ್ ಕಂಡರೆ ಅಸೂಯೆ ಎಂದು ಹೇಳಿದ್ದಾರೆ. ನಾನು ಯಾಕೆ ಅವರನ್ನು ನೋಡಿ ಅಸೂಯೆ ಪಡಲಿ? ವಿರೋಧಿಗಳಿಗೆ ತೊಂದರೆ ಕೊಡುವುದು. ದ್ವೇಷದ ರಾಜಕಾರಣ ಮಾಡುವುದಷ್ಟೆ ಕಾಂಗ್ರೆಸ್ ಸರ್ಕಾರದ ಕೆಲಸ ಆಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.ಸಂಸದ ಪ್ರಜ್ವಲ್ ರೇವಣ್ಣ ಪರವಾಗಿ ನಾನಿಲ್ಲ. ಆತನ ತಪ್ಪು ಸಾಬೀತಾದರೆ ಶಿಕ್ಷೆ ಕೊಡಿ. ಮುಖ್ಯಮಂತ್ರಿಗಳೇ ಅಧಿಕಾರ ಶಾಶ್ವತವಲ್ಲ. ನಿಮ್ಮ ಅಧಿಕಾರ ದುರುಪಯೋಗದ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಕುಮಾರಸ್ವಾಮಿ. ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೆ ಎಲ್ಲವೂ ತೀರ್ಮಾನವಾಗಿದೆ. ಪೊಲೀಸರ ರಕ್ಷಣೆಯಲ್ಲಿ ಎಂಟು ಜನ ಸೇರಿದಂತೆ ಕಾರ್ತಿಕ್ ಸಹ ಇದ್ದಾನೆ. ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ಮಾಡಿಲ್ಲ? ಪ್ರಮುಖ ಆರೋಪಿಯಾಗಿರುವ ನ್ಯಾಯಾಲಯಕ್ಕೆ ಹಾಜರು ಪಡಿಸಿಲ್ಲ ಹೇಳಿ? ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳನ್ನ ಪ್ರಶ್ನಿಸಿದ್ದಾರೆ.
1980 ರಲ್ಲೇ ಮಹಾನುಭಾವರು(ಡಿಕೆಶಿ) ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದರು. ಅಧಿಕಾರ ಯಾರ ಅಪ್ಪನ ಮನೆ ಆಸ್ತಿಯೂ ಅಲ್ಲ. ರಾಜಕೀಯದಲ್ಲಿ ಏಳು ಬೀಳು ಅದು ಭಗವಂತನ ಇಚ್ಚೆ. ಇದರಲ್ಲಿ ಅಸೂಯೆ ಯಾಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲ ಅಧಿಕಾರವನ್ನು ನಾವು ನೋಡಿಯಾಗಿದೆ. ನಮಗೆ ಅಧಿಕಾರ ಬೇಡ ಅಂದರೂ ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದರು.ಪೆನ್ ಡ್ರೈವ್ ಮೂಲ ವ್ಯಕ್ತಿ ಕಾರ್ತಿಕ್ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಇಟ್ಟುಕೊಂಡು ಡಿಕೆ ಸುರೇಶ್ಬಳಿಗೆ ಮೊದಲು ಹೋಗಿದ್ದನು. ನಂತರ ವಿಡಿಯೋಗಳನ್ನು ಸಿಡಿ ಶಿವಕುಮಾರ್ ಕಾಪಿ ಮಾಡಿಕೊಂಡು ಸಂತ್ರಸ್ತ ಮಹಿಳೆಯರ ಮುಖವನ್ನು ಹಾಗೆ ತೋರಿಸಿ ಮಹಿಳೆಯರಿಗೆ ತೊಂದರೆ ನೀಡಿದ್ದು ಅಪರಾಧ ಅಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರದ ಪೆನ್ಡ್ರೈವ್ ನನ್ನ ಬಳಿ ಇದೆ. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತ ಕಾಂಗ್ರೆಸ್ಸಿನವರು ಹೇಳುತ್ತೀರಿ. ಇದುವರೆಗೂ ಎಸ್ಐಟಿಗೆ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳಿ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ನನ್ನ ಅವಧಿಯಲ್ಲಿ ಯಾವ ಪ್ರಕರಣವನ್ನು ಎಸ್ಐಟಿಗೆ ಕೊಟ್ಟಿರಲಿಲ್ಲ ಎಂದು ಸಮರ್ಥಿಸಿಕೊಂಡರು.