ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಕೊಡಿಗೆಹಳ್ಳಿಯ ಆತ್ರೇಯ ಆರ್ಯುವೇದ ಕಾಲೇಜಿಗೆ ಬ್ಯಾಂಕಿನಿಂದ ಸಾಲ ಪಡೆದು ಮರು ಪಾವತಿಸದೇ ಇದ್ದ ಕಾರಣ ಕಾಲೇಜಿಗೆ ಬೀಗ ಹಾಕಲಾಗಿದ್ದು, ವಿದ್ಯಾರ್ಥಿಗಳ ಸ್ಥಿತಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹೊರವಲಯದ ಕೊಡಿಗೇಹಳ್ಳಿ ಹತ್ತಿರ ವಿರುವ ಆತ್ರೇಯ ಆರ್ಯುವೇದ ಮಹಾ-
ವಿದ್ಯಾಲಯ ಸುಮಾರು ಒಂದುವರೆ ತಿಂಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಾದ ವ್ಯಾಸಂಗ ಹಾಗೂ ಪರೀಕ್ಷೆಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಎಂದು ದೂರಿದ್ದಾರೆ.
ಕಾಲೇಜು ಬಳಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, 'ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸಿ ಕಾಲೇಜಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಪರೀಕ್ಷೆ ಬರೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಆತ್ರೇಯ ಆಯುರ್ವೇದ ಮಹಾವಿದ್ಯಾಲಯದಲ್ಲಿ 400 ವಿದ್ಯಾರ್ಥಿಗಳಿದ್ದು, ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ದಾಖಲಾತಿ ಪಡೆದಿದ್ದಾರೆ. ಕಾಲೇಜು ಬ್ಯಾಂಕಿನಿಂದ ಸಾಲ ಪಡೆದಿದ್ದು, ಮರುಪಾವತಿ ಮಾಡದ ಕಾರಣ ಬ್ಯಾಂಕ್‌ನವರು ಬೀಗ ಹಾಕಿದ್ದಾರೆ. ಒಂದು ತಿಂಗಳಿಂದ ಕಾಲೇಜಿನಲ್ಲಿ ಯಾವುದೇ ತರಗತಿ ಹಾಗೂ ಪರೀಕ್ಷೆ ನಡೆದಿಲ್ಲ.
ಈಗ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ಅತಂತ್ರವಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಯಾ ಊರಿನ ಸಮೀಪದ ಕಾಲೇಜುಗಳಲ್ಲಿ ಪ್ರವೇಶ ನೀಡಿ, ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಕಾಲೇಜು ಕುರಿತು ಸಮಗ್ರ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದರು. ಲಕ್ಷಾಂತರ ರೂಪಾಯಿ ಹಣ ಕಟ್ಟಿದ್ದರೂ, ವಿದ್ಯಾರ್ಥಿಗಳ ಪಾಲಿಗೆ ಈಗ ಕಾಲೇಜು ಮುಚ್ಚಿದೆ.
ಇಷ್ಟಾದರೂ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ಕಾಲೇಜು ಶುಲ್ಕ ಕಟ್ಟುವಂತೆ ಮೆಸೇಜ್ ಮಾಡಿದ್ದರು. ವಿದ್ಯಾರ್ಥಿಗಳಿಗೆ ದಿಕ್ಕೇ ತೋಚದಂತಾಗಿದೆ. ಕಾಲೇಜಿನ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ. ಪಿ.ಎಫ್ ಸಹ ಕಟ್ಟಿಲ್ಲ. ಸಿಬ್ಬಂದಿ ಸಹ ಕಾಲೇಜಿನ ಆಡಳಿತ ಮಂಡಲಿ ಮೇಲೆ ತೀವ್ರ ಆಕ್ರೋಶಗೊಂಡಿದ್ದರು' ಎಂದು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಪ್ರದೀಪ್ ಕುಮಾರ್ ದೂರಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ರಾಜ್ಯ ಮುಖಂಡ ಈ ವಾಸು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಜಿಲ್ಲಾ ಕಾರ್ಯಧ್ಯಕ್ಷಪ್ರದೀಪ್ ಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



