ಚಂದ್ರವಳ್ಳಿ ನ್ಯೂಸ್, ಮೈಸೂರು:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವೀರನಹೊಸಹಳ್ಳಿಯಲ್ಲಿ ಬುಧವಾರ ಗಜಪಯಣಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಬಾರಿಯ ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿ 'ಕಂಬಳ' ಕ್ರೀಡೆಯನ್ನೂ ಆಯೋಜಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಭ ತುಲಾ ಲಗ್ನದಲ್ಲಿ ಗಜಪೂಜೆ-
ಕಳೆದ 29 ವರ್ಷಗಳಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸುತ್ತಿರುವ ಅರ್ಚಕ ಪ್ರಹ್ಲಾದ್ ರಾವ್ ಅವರ ನೇತೃತ್ವದಲ್ಲಿ, ತುಲಾ ಲಗ್ನದಲ್ಲಿ ಗಜಪಡೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಗಜರಾಜರ ಪಾದ ತೊಳೆದು, ಅರಿಶಿನ-ಕುಂಕುಮ, ಗಂಧ ಹಚ್ಚಿ, ನೈವೇದ್ಯ ಹಾಗೂ ಹೂವಿನ ಅರ್ಚನೆ ಮಾಡಲಾಯಿತು. ನಂತರ ಕಬ್ಬು-ಬೆಲ್ಲ ನೀಡಿ, ದಸರಾ ಮಹೋತ್ಸವವು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂದು ಪ್ರಾರ್ಥಿಸಲಾಯಿತು.
ಅಭಿಮನ್ಯು ಆನೆಗೆ ಗೌರವದ ನಿವೃತ್ತಿ-
ಕಳೆದ 25 ವರ್ಷಗಳಿಂದ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿ, 6 ಬಾರಿ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು 'ಕೂಂಬಿಂಗ್ ಕಿಂಗ್' ಎಂದೇ ಹೆಸರುವಾಸಿಯಾಗಿದ್ದ ಅಭಿಮನ್ಯು ಆನೆಗೆ (60 ವರ್ಷ) ಗಜಪಯಣದ ಸಂದರ್ಭದಲ್ಲೇ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಗಜಪಡೆಯ ಮಧ್ಯೆ ಅಭಿಮನ್ಯು ಸಾಗುವಾಗ ಹೂಮಳೆ ಸುರಿಸಲಾಯಿತು. ಅಭಿಮನ್ಯು ಸೊಂಡಿಲೆತ್ತಿ ವಂದಿಸಿದರೆ, ಮಾವುತ ವಸಂತ ಸೆಲ್ಯೂಟ್ ಹೊಡೆದು ಕೃತಜ್ಞತೆ ಸಲ್ಲಿಸಿದರು.
ಕಂಬಳ ಆಯೋಜನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ, ಈ ಮುಂಚೆ ಗುರುತಿಸಲಾದ ಜಾಗದಲ್ಲೇ ಈ ಬಾರಿ ದಸರಾ ಕಂಬಳ ನಡೆಯಲಿದೆ.
ಅಂಬಾರಿ ಆನೆ ಇನ್ನೂ ತೀರ್ಮಾನವಾಗಿಲ್ಲ: 60 ವರ್ಷ ಪೂರೈಸಿದ ಆನೆಗಳನ್ನು ಬಳಸದಂತೆ ನ್ಯಾಯಾಲಯದ ನಿರ್ದೇಶನವಿರುವುದರಿಂದ, ಅಭಿಮನ್ಯುವನ್ನು ಮೈಸೂರಿಗೆ ಕರೆತರುವ ಬಗ್ಗೆ ಹಾಗೂ ಅಂಬಾರಿ ಹೊರಲಿರುವ ಆನೆಯ ಆಯ್ಕೆಯ ಕುರಿತು ಗಜಪಡೆಯ ತಾಲೀಮಿನ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
ಮೊದಲ ತಂಡದ ಗಜಪಡೆ: ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿವೆ. ಸುಗ್ರೀವ ಆನೆಯ ಬದಲಿಗೆ ‘ಶ್ರೀಕಂಠ’ ಆನೆ ಮೊದಲ ತಂಡ ಸೇರಿಕೊಂಡಿದ್ದು, ಸುಗ್ರೀವ 2ನೇ ತಂಡದಲ್ಲಿ ಆಗಮಿಸಲಿದ್ದಾನೆ.
ಆಗಸ್ಟ್ 28ರಂದು ಬೆಳಿಗ್ಗೆ 8:45ಕ್ಕೆ ಮೈಸೂರಿನ ಅರಣ್ಯ ಭವನದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬಳಿಕ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಗುವುದು ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ.



